ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಸಿ ಅಪರ್ಣಾ ರಮೇಶ | ಎರಡು ದಿನಗಳ ಕಾಲ ಸಾಂಸ್ಕೃತಿಕ ವೈಭವ
ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಮಾ. 5 & ರಂದು ನಡೆಯುವ ರಾಜ್ಯಮಟ್ಟದ ಕದಂಬೋತ್ಸವದ ತಯಾರಿ ಭರದಿಂದ ಸಾಗಿದ್ದು, ಆಮಂತ್ರಣ ಪತ್ರಿಕೆಯನ್ನು ಗುರುವಾರ ಸಹಾಯಕ ಆಯುಕ್ತೆ ಅಪರ್ಣಾ ರಮೇಶ ಬಿಡುಗಡೆಗೊಳಿಸಿದರು.
ಮಾ.5 ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉತ್ಸವಕ್ಕಾಗಿ ರಾಜ್ಯ ಸರಕಾರದಿಂದ ಎರಡು ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಸಕಲ ತಯಾರಿಯೊಂದಿಗೆ ಉತ್ಸವ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಜ್ಜಾಗಿದೆ ಎಂದರು.
ತಾಲೂಕಿನ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ವಿಪಕ್ಷ ನಾಯಕ ಆರ್.ಅಶೋಕ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಇತರರು ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಶಾಸಕ ಶಿವರಾಮ ಹೆಬ್ಬಾರ್ ವಹಿಸಲಿದ್ದಾರೆ. ಪಂಪ ಪ್ರಶಸ್ತಿ ಪುರಸ್ಕೃತ ನಾ.ಡಿಸೋಜ ಭಾಗವಹಿಸಿದ್ದಾರೆ.
ಮಾ.5 ರ ಮಧ್ಯಾಹ್ನ 2 ಗಂಟೆಗೆ ಇಲ್ಲಿಯ ಮಧುಕೇಶ್ವರ ದೇವಸ್ಥಾನದ ಎದುರಿನಿಂದ ಕದಂಬ ಸಾಂಸ್ಕೃತಿಕ ಕಲಾ ಮೆರಣಿಗೆ ನಡೆಯಲಿದ್ದು, ಸಮಾರೋಪ ಸಮಾರಂಭ ಮಾ.6 ರ ಸಂಜೆ 6 ಕ್ಕೆ ಬನವಾಸಿಯಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ಜಮೀರುಲ್ಲ ಷರೀಫ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರತಿಭೆಗಳ ಜೊತೆಗೆ ಮೊದಲ ದಿನ ರಘು ದೀಕ್ಷಿತ್ ತಂಡ ಹಾಗೂ ಎರಡನೇ ದಿನ ಹರಿಕೃಷ್ಣ ತಂಡ ಬೆಂಗಳೂರು ಕಾರ್ಯಕ್ರಮ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ:
ಎರಡು ದಿನಗಳ ಉತ್ಸವದ ಮೊದಲ ದಿನ ಸುಜಾತಾ ಧಾರವಾಡ ಭಕ್ತಿಸಂಗೀತ, ಶಹನಾಯಿ ಡಾ. ಕೃಷ್ಣ ಬಾಲ್ಲೇಶ, ವಚನ ಸಂಗೀತ ರೋಹಿಣಿ ಹಿರೇಮಠ, ಸುಗಮ ಸಂಗೀತ ಶಿರಸಿ ರತ್ನಾಕರ, ಭರತನಾಟ್ಯ ಡಾ. ಚೇತನಾ ರಾಧಾಕೃಷ್ಣನ್, ಶ್ರೇಯಾ ಪಾಟೀಲ, ಗಿಚ್ಚಿ ಗಿಲಿಗಿಲಿ ತಂಡ ಕಾಮಿಡಿ ಶೋ, ಕೃತ್ತಿಕಾ ದಯಾನಂದ ನೃತ್ಯ ವೈಭವ, ರವಿ ತಂಡದಿಂದ ಆಕ್ಸಿಜನ್ ಡಾನ್ಸ್ ನಡೆಯಲಿದೆ. ಬಳಿಕ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಾ.6 ರ ಬೆಳಿಗ್ಗೆ 10.30 ರಿಂದ ಕವಿಗೋಷ್ಠಿ ನಡೆಯಲಿದೆ. ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿಗಳಾದ ಸುಧಾ ಆಡುಕಳ, ಪಿ.ಆರ್.ನಾಯ್ಕ, ಗಣಪತಿ ಬಾಳೆಗದ್ದೆ, ಶ್ರೀಧರ ಶೇಟ್, ಪದ್ಯಾಯಣ ಗೋವಿಂದ ಭಟ್ಟ, ನಾಗವೇಣಿ ಹೆಗ್ಗರಸಿಮನೆ, ನಂದಿನಿ ಹೆದ್ದುರ್ಗ, ಕೃಷ್ಣ ನಾಯ್ಕ, ಡಾ. ಸಮೀರ ಹಾದಿಮನಿ ಭಾಗವಹಿಸುವರು. ಸಂತೋಷ ಕುಮಾರ ಮೆಹೆಂದಳೆ, ಬಿ.ಎನ್.ರಮೇಶ, ಜಿ.ಸು.ಬಕ್ಕಳ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ ೨:೩೦ಕ್ಕೆ ಇತಿಹಾಸ ಗೋಷ್ಠಿ ನಡೆಯಲಿದೆ. ಕೆ.ಎನ್.ಹೊಸ್ಮನಿ ಅಧ್ಯಕ್ಷತೆವಹಿಸಲಿದ್ದಾರೆ. ಮೋಹನ ಭರಣಿ ವಿಷಯ ಮಂಡಿಸಲಿದ್ದಾರೆ.
ಸಂಜೆ 5 ಗಂಟೆಯಿಂದ ಶಮಾ ಭಾಗವತ್ ಚಿತ್ರದುರ್ಗ ನೃತ್ಯ ರೂಪಕ, ರೇಖಾ ದಿನೇಶ ಸಂಗೀತ, ವಿನುತಾ ಯಲ್ಲಾಪುರ ನೃತ್ಯ, ನಿನಾದ ತಂಡದಿಂದ ತಬಲಾ ವಾದನ, ನಿರ್ಮಲಾ ಗೋಳಿಕೊಪ್ಪ ತಂಡದಿಂದ ಯಕ್ಷಗಾನ, ವಿಜೇತ ಸುದರ್ಶನ, ಬಸವರಾ ಬಂಟನೂರು, ಸುಗಮ ಸಂಗೀತ, ರಮೀಂದರ ಖುರಾನ ಒಡಿಸ್ಸಿ ನೃತ್ಯ, ಬಸಯ್ಯ ಗುತ್ತೇದಾರ ಜಾನಪದ ಸಂಗೀತ, ಕೃಪಾ ಹೆಗಡೆ ಭರತನಾಟ್ಯ, ರಜತ್ ಹೆಗಡೆ ಹಾಗೂ ಶ್ರೀಲಕ್ಷ್ಮಿ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಬಳಿಕ ಹರಿಕೃಷ್ಣ ತಂಡದಿಂದ ಸಂಗೀತ ಸಂಭ್ರಮ ನಡೆಯಲಿದೆ ಎಂದರು.
ಈ ವೇಳೆ ತಹಸೀಲ್ದಾರ ಶ್ರೀಧರ ಮುಂದಲಮನಿ, ಉಪ ತಹಶೀಲ್ದಾರರಾದ ಶ್ರೀಕೃಷ್ಣ ಕಾಮಕರ, ರಮೇಶ ಹೆಗಡೆ, ಬಿಇಓ ನಾಗರಾಜ ನಾಯ್ಕ, ಇಓ ಸತೀಶ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.