ಗುರುವಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನ
ಸಿದ್ದಾಪುರ: ತಾಲೂಕಿನ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆಯಲ್ಲಿ ಸ್ಪಂದನ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ತಾಲೂಕಿನ ಗಡಿಭಾಗದಲ್ಲಿ ಇರುವ ಅತ್ಯಂತ ದಟ್ಟ ಕಾನನ ಪ್ರದೇಶದಲ್ಲಿ ಇರುವ ನಿಲ್ಕುಂದ ಪಂಚಾಯತ ವ್ಯಾಪ್ತಿಯ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆಯಲ್ಲಿ ಈ ಭಾವನಾತ್ಮಕ ಕಾರ್ಯಕ್ರಮ ನಡೆಯಿತು. ಟ್ರಸ್ಟ್ ನ ದಶಮಾನೋತ್ಸವದ ನಿಮಿತ್ತ ಹುತ್ಗಾರ ಶಾಲೆಯಲ್ಲಿ 2009 ರಿಂದ 2014 ರವರೆಗೆ ಸೇವೆ ಸಲ್ಲಿಸಿ ಪ್ರಸ್ತುತ ತಮ್ಮ ನಿವೃತ್ತಿ ಜೀವನವನ್ನು ಸಾಗಿಸುತ್ತಿರುವ ಶಿಕ್ಷಕ ಸಿ.ಎನ್. ಪಾಲಂಕರ್ ಅವರಿಗೆ ಟ್ರಸ್ಟ್ ನ ವತಿಯಿಂದ ಹಾಗೂ ಹಳೆ ವಿದ್ಯಾರ್ಥಿಳಿಂದ ಗುರುವಂದನೆ ಸಲ್ಲಿಸಿ, ಅಭಿನಂದಿಸಿದರು.
ಗುರುವಂದನೆ ಸ್ವೀಕರಿಸಿ ಈ ವೇಳೆ ಮಾತನಾಡಿದ ಅವರು, ಇದೊಂದು ಭಾವನೆಗಳನ್ನು ತೆರೆಸುವ ಸನ್ಮಾನವಾಗಿದ್ದು, ನಿಜಕ್ಕೂ ಸಂತಸ ತಂದಿದೆ. ಗುರುಭಕ್ತಿ ಮೂಲಕವೇ ವಿದ್ಯಾರ್ಥಿಗಳು ಉನ್ನತಿಯನ್ನು ಸಾಧಿಸಬೇಕು. ಈ ಹಿನ್ನಲೆಯಲ್ಲಿ ಟ್ರಸ್ಟ್ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಮಾಜಿಕ ಕಾರ್ಯ ನಿಜಕ್ಕೂ ಸ್ಮರಣೀಯ. ಮುಂದಿನ ದಿನದಲ್ಲಿ ಸ್ಪಂದನಾ ಟ್ರಸ್ಟ್ ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಆಶಿಸಿ, ಶುಭಕೋರಿದರು.
ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಇದರ ಕುರಿತು: ಊರಿನ ಉತ್ಸಾಹಿ ಯುವಕರು ಸೇರಿಕೊಂಡು ಗ್ರಾಮ ವಿಕಾಸದ ಪರಿಕಲ್ಪನೆಯಲ್ಲಿ ಗ್ರಾಮದ ಏಳಿಗೆಗಾಗಿ ಹಾಗೂ ಸಮಾಜ ಸೇವೆಯ ದೃಷ್ಟಿಯಿಂದ 2014-15 ನೇ ಸಾಲಿನಲ್ಲಿ ಸ್ಥಾಪನೆಗೊಂಡು ಇಲ್ಲಿಯವರೆಗೆ ತಮ್ಮ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುವುದರೊಂದಿಗೆ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಗ್ರಾಮದಲ್ಲಿ 25 ಮನೆಗಳಿಗೆ FTTH ವ್ಯವಸ್ಥೆ ಕಲ್ಪಿಸಿರುವುದು, ನೆರೆಯ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯ, ಕೋವಿಡ್ ಸಂದರ್ಭದಲ್ಲಿ ಪಿ.ಎಂ. ಕೇರ್ ಹಾಗೂ ಸಿ.ಎಮ್. ಕೇರ್ ಗೆ ಧನ ಸಹಾಯ, ಹೀಗೆ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಇಲ್ಲಿನ ಯುವಕರು ಹಾಗೂ ಈ ಊರಿನಿಂದ ಹೊರಗಡೆ ನೆಲೆಸಿರುವವರೇ ಸೇರಿಕೊಂಡು ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಪ್ರತಿ ವರ್ಷ ವಾರ್ಷಿಕ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಹುತ್ಗಾರನಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ ಎಂಟು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿರುತ್ತಾರೆ.
ಅದೇ ರೀತಿ ಸಾಂಸ್ಕೃತಿಕ ಕಲೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ಕಲಾವಿದರುಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟಿದ್ದು, ಜಾನಪದ ನೃತ್ಯ, ಬಿಂಗಿ ಕುಣಿತ, ಡೊಳ್ಳು ಕುಣಿತ, ಕೋಲಾಟ, ಭರತನಾಟ್ಯ, ಸಂಗೀತ, ನಾಟಕ, ಯಕ್ಷಗಾನ, ಹೀಗೆ ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸಿ ಕಲಾವಿದರಿಗೆ ಹಾಗೂ ಕಲೆಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.
ಈ ಸಂಘಟನೆಯ ವಿಶೇಷತೆಯೆಂದರೆ ಟ್ರಸ್ಟ್ ನ ಬೆಳವಣಿಗೆಗೆ ಅಥವಾ ಸೇವಾ ಕಾರ್ಯಗಳಿಗೆ ಈ ಗ್ರಾಮದ ಹಾಗೂ ಉದ್ಯೋಗ ನಿಮಿತ್ತ ಬೇರೆ ಕಡೆಗಳಲ್ಲಿ ನೆಲೆಸಿರುವ ಊರಿನ ವ್ಯಕ್ತಿಗಳೇ ತಮ್ಮ ಶಕ್ತಿಯಾನುಸಾರ ತನು,ಮನ, ಧನ ಸಹಾಯ ಮಾಡುತ್ತಾ ಬಂದಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಈ ಟ್ರಸ್ಟ್ ಒಂದು ಮಾದರಿಯಾಗಿ ನಿಲ್ಲುತ್ತದೆ. ಪ್ರಸ್ತುತ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿ ದಶಮಾನೋತ್ಸವದ ಸಂಭ್ರಮದಲ್ಲಿ ಇದೆ. ಟ್ರಸ್ಟ್ ನ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಹೋಗಲು ಹತ್ತು ವರ್ಷಗಳ ಹಿಂದೆ ನೋಂದಣಿ ಸಂದರ್ಭದಲ್ಲಿ ಪದಾಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದ್ದು ಅಧ್ಯಕ್ಷರಾಗಿ ಪ್ರಸನ್ನ ಹೆಗಡೆ ಸೂರನಜಡ್ಡಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಹೆಗಡೆ ಕೊಡಮೂಡ್, ಕಾರ್ಯದರ್ಶಿಯಾಗಿ ಗಣೇಶ ಹೆಗಡೆ ಬಿಳೆಕಲ್ಲು, ಸಹಕಾರ್ಯದರ್ಶಿಯಾಗಿ ಪ್ರಸನ್ನ ಹೆಗಡೆ ಹಳ್ಳಿಬೈಲ್, ಖಜಾಂಚಿಯಾಗಿ ಕಿರಣ ಭಟ್ಟ ಹುತ್ಗಾರ, ಸದಸ್ಯರುಗಳಾಗಿ ರಾಜಾರಾಮ ಹೆಗಡೆ ಬಿಳೆಕಲ್ಲು, ದಿನೇಶ ಹೆಗಡೆ ಗಿಳಿಗುಂಡಿ, ನರೇಂದ್ರ ಹೆಗಡೆ ಬಿಳೆಕಲ್ಲು, ಕಾರ್ಯನಿರ್ವಹಿಸುತ್ತಾ ಬಂದಿದೆ.
ಪಾರದರ್ಶಕ ಆಡಳಿತ ಹಾಗೂ ದೂರದೃಷ್ಟಿತ್ವದ ಮೂಲಕ ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಅನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೆ ಒಂದು ವಿಶಿಷ್ಟ ಹಾಗೂ ಇತರರಿಗೆ ಮಾದರಿಯಾಗುವ ಹಾಗೆ ಟ್ರಸ್ಟ್ ಅನ್ನು ಮುನ್ನಡೆಸುತ್ತಾ ಬಂದಿರುವುದನ್ನು ಕಾಣಬಹುದು.