Slide
Slide
Slide
previous arrow
next arrow

ದೇಶವನ್ನಾಳುವ ಸಾಮರ್ಥ್ಯವನ್ನು ಮುಂದಿನ ಪೀಳಿಗೆಯಲ್ಲಿ ನಿರ್ಮಿಸಬೇಕು; ಹರಿಪ್ರಕಾಶ ಕೋಣೆಮನೆ

300x250 AD

ಯಲ್ಲಾಪುರ: ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಕುರಿತು ಚಿಂತಿಸುವ ನಾವು, ಶಾಲೆಯ ಅಕ್ಕ ಪಕ್ಕದ ಗ್ರಾಮಗಳು ಖಾಲಿಯಾಗುವ ಕುರಿತು ಚಿಂತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ಚಿಂತನೆ ನಡೆಯಬೇಕಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಸೋಮವಾರ ತಾಲೂಕಿನ ಹಾಸಣಗಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇಂದು ಖಾಸಗಿ ಶಾಲೆಗಳನ್ನು ಕಾರಣ ಎಂದು ದೂಷಿಸಲಾಗುತ್ತಿದೆ. ಆದರೆ ಇದಕ್ಕೆ ನೇರ ಕಾರಣ ಸರ್ಕಾರವೇ ಆಗಿದೆ. ಖಾಸಗಿ ಶಾಲೆಗಳಿಗೆ ನಿಬಂಧನೆ ಹಾಕುವ ಸರ್ಕಾರ, ಅದೇ ನಿಬಂಧನೆಗಳು ಸರ್ಕಾರಿ ಶಾಲೆಗಳಿಗೆ ಅನ್ವಯಿಸುವುದಿಲ್ಲವೇ ಎಂದು ಸರ್ಕಾರ ಅವಲೋಕಿಸಬೇಕಿದೆ. ನಾವು ಇಲ್ಲಿ ಕುಳಿತು ದೇಶವನ್ನು ಆಳುವ ಸಾಮರ್ಥ್ಯವನ್ನು ನಮ್ಮ ಮುಂದಿನ ತಲೆಮಾರಿಗೆ ನಿರ್ಮಿಸುವ ಕುರಿತು ನಾವೆಲ್ಲ ಇಂದು ಚಿಂತಿಸಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿಯ ವಿಶ್ರಾಂತ ಉಪ ಕುಲಪತಿ ಪರಮೇಶ್ವರ ಶಾಸ್ತ್ರಿ, ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವ, ಜ್ಞಾನೇಂದ್ರಿಯಗಳಿಗೆ ಚೈತನ್ಯ ನೀಡುವ ಪ್ರಾಥಮಿಕ ಹಂತದ ಶಿಕ್ಷಣ ಪ್ರಧಾನವಾದದ್ದು ಎಂದು ತಿಳಿಸಿದರು. ಶತಮಾನೋತ್ಸವ ಆಚರಣೆಯ ಈ ಸುಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸೌಕರ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಗುಣಮಟ್ಟ ಹಾಗೂ ಸಂಖ್ಯಾಬಲದಲ್ಲಿ ನಮ್ಮ ಈ ಶಾಲೆಯು ಅಭಿವೃದ್ದಿ ಹೊಂದಲಿ ಎಂಬುದು ಹಾರೈಕೆ ಎಂದರು.

300x250 AD

ಹಿರಿಯ ಪತ್ರಕರ್ತ ತಿಮ್ಮಪ್ಪ ಜಿ. ಭಟ್ ಮಾತನಾಡಿ, ಶತಮಾನೋತ್ಸವ ಆಚರಣೆಗೆ ಜನರು ತೋರಿದ ಉತ್ಸಾಹವನ್ನು ಕಂಡು ಸಂತಸವಾಯಿತು. ಬಾಲ್ಯದ ದಿನಗಳು ಅತ್ಯಂತ ಸಂತಸ ತರುವಂತಹ ದಿನಗಳು. ನಾವು ಹೆಚ್ಚಿನದಾಗಿ ನಮ್ಮ ಬಾಲ್ಯಕ್ಕೆ ಜೋಡಿಸಿಕೊಂಡಾಗ ನಮ್ಮಲ್ಲಿರುವ ಮುಗ್ಧತೆ ಜಾಗೃತವಾಗಿರುತ್ತದೆ. ನಮ್ಮ ಬಾಲ್ಯದ ಶಿಕ್ಷಣದ ಹಾಗೂ ಪರಿಸರದಿಂದ ಪಡೆದ ಪ್ರಭಾವ ನಮ್ಮ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾನ್ ಸೇನ್ ಪ್ರಶಸ್ತಿ ಪುರಸ್ಕೃತ ಪಂಡಿತ್ ಗಣಪತಿ ಭಟ್ ಹಾಸಣಗಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಮಾಜಿ ವಿದ್ಯಾರ್ಥಿಗಳಿಗಾಗಿ ಉನ್ನತ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಶತನೋತ್ಸವದ ಸವಿ ನೆನಪಿಗಾಗಿ “ತೇಜೋನಿಧಿ” ಕೃತಿ ಲೋಕರ್ಪಣೆಗೊಳಿಸಲಾಯಿತು.
ವೇದಿಕೆಯಲ್ಲಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಉಪನಿರ್ದೇಶಕ ಪಾರಿ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಪಂ. ಅಧ್ಯಕ್ಷೆ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಪಂ. ಸದಸ್ಯೆ ಅಮೃತಾ ಪೂಜಾರಿ, ಜಿಲ್ಲಾ ಪಂ. ಮಾಜಿ ಸದಸ್ಯ ರಾಘವೇಂದ್ರ ಭಟ್, ರಂಗಸಮೂಹದ ಅಧ್ಯಕ್ಷ ಆರ್.ಎನ್. ಭಟ್ ದುಂಡಿ, ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ, ಪ್ರಮುಖರಾದ ಗೋಪಾಲ ಆರ್. ಭಟ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಸಿದ್ದಿ, ಅಕ್ಷರ ದಾಸೋಹ ನೋಡಲ್ ಅಧಿಕಾರಿ ಎಂ.ಕೆ. ಮೊಗೇರ, ವಿಷಯ ಪರಿವೀಕ್ಷಕ ಜಿ.ಆರ್. ಹೆಗಡೆ, ಶಾಂತಾರಾಮ ಹೆಗಡೆ, ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್., ಸಿ.ಆರ್.ಪಿ. ಕೆ.ಆರ್. ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಮುಖ್ಯಾಧ್ಯಾಪಕರಾದ ಗಿರಿಜಾ ಭಟ್ ವರದಿ ವಾಚಿಸಿದರು. ವಸಂತ ಶಾಸ್ತ್ರಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top