ಭಟ್ಕಳ: ಇಲ್ಲಿನ ಸಂಶುದ್ದೀನ್ ಸರ್ಕಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಪುರಸಭಾ ಸದಸ್ಯರು ತಕರಾರು ತೆಗೆದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತರೊಂದಿಗೆ ಸ್ಥಳಕ್ಕೆ ಆಗಮಿಸಿದ ಪುರಸಭಾ ಸದಸ್ಯರಾದ ಕೈಸರ್ ಮೊತೇಶಮ್. ಫಯಾಜ್, ಅಬ್ದುಲ್ ಅಜೀಮ್, ಅಬ್ದುಲ್ ರವೂಫ್ ನಾಯಿತೇ, ಆಲ್ತಾಫ್ ಖರೂರಿ ಮತ್ತಿತರರು ಕಾಮಗಾರಿಯ ಕುರಿತಂತೆ ತಮ್ಮ ಅಸಮಾಧಾನ ಹೊರ ಹಾಕಿದರು. ಈ ಹಿಂದೆ ಇಲ್ಲಿನ ಗೌಸಿಯಾ ಸ್ಟ್ರೀಟ್‌ನಲ್ಲಿ ಸ್ಥಾಪಿಸಲಾದ ತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ಅಲ್ಲಿನ ಜನರು, ದುರ್ವಾಸನೆ,ಕಲುಷಿತ ನೀರು, ರೋಗರುಜಿನಗಳು ಇತ್ಯಾದಿ ವಿವಿಧ ರೀತಿಯ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದು, ಈಗ ಮತ್ತೆ ಅದೇ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಹೊಸ ಸಂಪರ್ಕ ಜೋಡಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಒತ್ತಡದಿಂದಾಗಿ ಗೌಸಿಯಾ ಸ್ಟ್ರೀಟ್‌ನಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಕಾಮಗಾರಿಯ ಬಗ್ಗೆ ಪುರಸಭಾ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಮುಂದುವರೆಸಲಾಗಿದೆ. ಇದರಿಂದ ನಮಗೆ ಜನರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಮೊದಲು ಸರ್ಕಲ್‌ನಲ್ಲಿ ಕೊರೆಯಲಾದ ಹೊಂಡವನ್ನು ಮುಚ್ಚಿ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಿ, ಪುರಸಭಾ ಆಡಳಿತಕ್ಕೆ ಆಗತ್ಯ ಮಾಹಿತಿ ನೀಡಿದ ನಂತರ ಕಾಮಗಾರಿ ಮುಂದುವರೆಸಬಹುದು ಎಂದು ಆಕ್ರೋಶ ಹೊರ ಹಾಕಿದರು. ಸದಸ್ಯರ ಆಕ್ಷೇಪಕ್ಕೆ ಮಣಿದು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಬಗ್ಗೆ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.