ಅಂಕೋಲಾ: ಕರ್ನಾಟಕ ಅರಣ್ಯ ಇಲಾಖೆಯ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ & ಮರೈನ್ ಘಟಕದ ವತಿಯಿಂದ ಸಂರಕ್ಷಿಸಲ್ಪಟ್ಟ ಆಲಿವ್ ರಿಡ್ಲೇ ಕಡಲಾಮೆ ಮೊಟ್ಟೆಗಳಿಂದ ಹೊರಬಂದ 53 ಮರಿಗಳನ್ನು ಸೋಮವಾರ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಿಸಿಎಫ್ ರವಿಶಂಕರ ಸಿ ಮತ್ತು ಅಂಕೋಲಾ ಎಸಿಎಫ್ ಕೃಷ್ಣ ಅಣ್ಣಯ್ಯ ಗೌಡ ಅವರ ಮಾರ್ಗದರ್ಶನದಂತೆ ಮಂಜುಗುಣಿ ಸಮುದ್ರದಲ್ಲಿ ಬಿಡಲಾಯಿತು.
ಕಾರವಾರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಈಗಾಗಲೇ 79 ಕಡಲಾಮೆ ಮೊಟ್ಟೆಯಿಡುವ ಪ್ರದೇಶಗಳನ್ನು ಗುರುತಿಸಿ ಮೊಟ್ಟೆಗಳನ್ನು ಸಂಗ್ರಹಿಸಲಾಗುತ್ತಿದ್ದು ಕಳೆದ ಸಾಲಿನಲ್ಲಿ 44 ಗೂಡುಗಳನ್ನು ಸಂರಕ್ಷಿಸಲಾಗಿತ್ತು. ಕಾರವಾರದ ದೇವಭಾಗ, ಮಾಜಾಳಿ, ರವೀಂದ್ರನಾಥ ಠಾಗೋರ ಬೀಚ್ ಮತ್ತು ಅಂಕೋಲಾದ ಭಾವಿಕೇರಿ, ಮಂಜಗುಣಿ ಹಾರವಾಡ ತೀರಗಳಲ್ಲಿ ಮೊಟ್ಟೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಈಗ ಬಿಟ್ಟ ಮರಿಗಳು ಮೊಟ್ಟೆಯಿಟ್ಟ 53 ದಿನಕ್ಕೆ ಹೊರಬಂದ ಮರಿಗಳಾಗಿವೆ.
ಕಾರ್ಯಕ್ರಮದಲ್ಲಿ ಕಡಲ ಜೀವಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಎನ್.ವಿ.ನಾಯಕ, ವಲಯ ಅರಣ್ಯಾಧಿಕಾರಿಗಳಾದ ಜಿ.ವಿ.ನಾಯಕ, ಪ್ರಮೋದ ನಾಯಕ ಹೊನ್ನೆಬೈಲ್, ಹೊನ್ನೆಬೈಲ್ ಗ್ರಾ. ಪಂ. ಅಧ್ಯಕ್ಷ ವೆಂಕಟರಮಣ ನಾಯ್ಕ, ಮಂಜುಗುಣಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದು ಕಡಲಾಮೆಯ ಮರಿಗಳು ಸಮುದ್ರ ಸೇರುವುದರಲ್ಲಿ ಸಾಕ್ಷಿಯಾದರು.
ಅರಣ್ಯ ಇಲಾಖೆಯಲ್ಲಿ ಕೋಸ್ಟಲ್ & ಮರೈನ್ ಇಕೋ ಸಿಸ್ಟಮ್ ಎಂಬ ನೂತನ ಘಟಕವನ್ನು ಕಡಲ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳನ್ನು ಸಂರಕ್ಷಿಸುವ ಸಲುವಾಗಿ ರಚಿಸಲಾಗಿದೆ. ಈ ಘಟಕದ ವತಿಯಿಂದ ಅದರಲ್ಲೂ ವಿಶೇಷವಾಗಿ ಕಡಲಾಮೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಭಾರತದಲ್ಲಿ ಕಂಡುಬರುವ 5 ಜಾತಿಯ ಕಡಲಾಮೆಗಳಲ್ಲಿ ಆಲೀವ ರಿಡ್ಲೆ ಕಡಲಾಮೆಗಳು ಮಾತ್ರ ಕರ್ನಾಟಕದ ಕರಾವಳಿಯಲ್ಲಿ ಮೊಟ್ಟೆಯಿಡುವುದು ದಾಖಲಾಗಿರುತ್ತದೆ. ಡಿಸೆಂಬರನಿಂದ ಮಾರ್ಚವರೆಗೆ ಕಡಲಾಮೆಗಳು ಮೊಟ್ಟೆಯಿಡುವ ಕಾಲವಾಗಿದ್ದು ಕಡಲಾಮೆ ಮೊಟ್ಟೆಗಳನ್ನು ಗುರುತಿಸಿ ಮಾಹಿತಿ ನೀಡಿದವರಿಗೆ ಇಲಾಖೆಯ ವತಿಯಿಂದ 1000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಕಡಲಾಮೆಗಳು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಜೀವಿ ಪ್ರಬೇಧವಾಗಿದೆ.