ದಾಂಡೇಲಿ: ಭವಿಷ್ಯದಲ್ಲಿ ದೇಶವನ್ನು ಕಟ್ಟುವ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕು. ಸದೃಢ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಂಶವಿರುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಆರೋಗ್ಯವಂತ ಮಗು ದೇಶದ ಸಂಪತ್ತು ಎಂದು ಧಾರವಾಡದ ಖ್ಯಾತ ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ ಹೇಳಿದರು.
ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಹಾಗೂ ಧಾರವಾಡದ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೇಷಾಲಿಟಿ ಆರೋಗ್ಯ ಕೇಂದ್ರದ ಇವರ ಸಹಯೋಗದಲ್ಲಿ ಭಾನುವಾರ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಔದ್ಯೋಗಿಕ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಇಂತಹ ಶಿಬಿರವನ್ನು ಕಾಗದ ಕಾರ್ಖಾನೆ ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ಸುಮಾರು 20 ಜನ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಈ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಕಳೆದುಕೊಳ್ಳುವಂತೆ ಕರೆ ನೀಡಿದರು.
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಕಾರ್ಯನಿರ್ವಾಹಕ ನಿರ್ದೆಶಕರಾದ ರಾಜೇಂದ್ರ ಜೈನ್ ಮಾತನಾಡಿ, ಕಾರ್ಖಾನೆಯ ಉದ್ಯಮ ಸಾಮಾಜಿಕ ಹೊಣೆಗಾರಿಕೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಚಿಕಿತ್ಸೆ , ತಪಾಸಣೆ ಹಾಗೂ ಔಷಧಿ ವಿತರಣೆ ನಡೆಯಲಿದೆ ಎಂದರು. ದಾಂಡೇಲಿಯಲ್ಲಿ ಚಿಕ್ಕ ಮಕ್ಕಳ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಪ್ರತಿ ವರ್ಷವೂ ಇದಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಭಾಗದ ಬಡ ಜನರಿಗೆ ಇದು ಪ್ರಯೋಜನಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಔದ್ಯೋಗಿಕ ಆಸ್ಪತ್ರೆಯ ವೈದ್ಯರಾದ ಡಾ. ಪ್ರಭು ಪ್ರಸಾದ್, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಕೆ.ಜಿ.ಗಿರಿರಾಜ, ರಾಜೇಶ ತಿವಾರಿ, ರಾಘವೇಂದ್ರ ಜೆ.ಐ. ಹಾಗೂ ಪಿ.ಆರ್.ಓ ವಿಭಾಗದ ಖಲೀಲ್ ಕುಲಕರ್ಣಿ , ರಾಜು ರೋಸಯ್ಯ, ಪ್ರಸಾದ ಕರ್ಕರೆ ಹಾಗೂ ಔದ್ಯೋಗಿಕ ಆಸ್ಪತ್ರೆಯ ಸಿಬ್ಬಂದಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಶಿಬಿರದಲ್ಲಿ ಖ್ಯಾತ ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ, ಡಾ ಕವನ ದೇಶಪಾಂಡೆ ಸೇರಿದಂತೆ ಮಕ್ಕಳ ತಜ್ಞರು, ಮಕ್ಕಳ ನರ ರೋಗ ಶಸ್ತ್ರ ತಜ್ಞರು, ಮಕ್ಕಳ ಹೃದಯ ರೋಗ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ಶಸ್ತ್ರ ಚಿಕಿತ್ಸಕರು, ಹಲ್ಲಿನ ತಜ್ಞರು, ಸಲಹೆಗಾರರು ಮತ್ತು ಮನೋವಿಜ್ಞಾನಿಗಳು ಹೀಗೆ ಒಟ್ಟು 20 ತಜ್ಞ ವೈದ್ಯರು ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ನೊಂದಾಯಿಸಿಕೊಂಡ ಶಿಬಿರಾರ್ಥಿಗಳಿಗೆ ಆರೋಗ್ಯ
ಸಲಹೆ ಸೂಚನೆಗಳನ್ನು ನೀಡಿ ಉಚಿತವಾಗಿ ಔಷಧಿಗಳನ್ನು ವಿತರಿಸಿದರು.
ಶಿಬಿರದಲ್ಲಿ ವಿಟ್ನಾಳ, ಗಾವಟಾನ, ಹಾಲಮಡ್ಡಿ, ಮೈನಾಳ, ಕೋಗಿಲಬನ, ಬಡಕಾನಶಿರಡಾ, ಹಾರ್ನೋಡ, ಸಾಕ್ಷಾಳಿ ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಭಾಗವಹಿಸಿ ಶಿಬಿರದ ಲಾಭ ಪಡೆದರು.