ತಾರೇಹಳ್ಳಿ ಕಾನಸೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸುವರ್ಣಮಹೋತ್ಸವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ
ಸಿದ್ದಾಪುರ: ಹಿರಿಯರು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಯನ್ನು ಇಂದು ಉಳಿಸಿಕೊಂಡು ಹೋಗುವುದು ಒಂದು ಸವಾಲಾಗಿದೆ ಎಂದು ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಅವರು ಭಾನುವಾರ ತಾಲೂಕಿನ ತಾರೇಹಳ್ಳಿ ಕಾನಸೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸುವರ್ಣಮಹೋತ್ಸವ ಸಮಾರಂಭವನ್ನು ಸಂಘದ ದಿ.ಸುಬ್ರಾಯ ಹೆಗಡೆ ಮುತ್ಮುರ್ಡು ವೇದಿಕೆಯನ್ನು ಉದ್ಘಾಟಿಸಿ, ಮಾತನಾಡಿದರು.
ಸಹಕಾರ ಸಂಘದಲ್ಲಿ ತೊಡಗಿಕೊಳ್ಳದವರು ಸರ್ಕಾರದಿಂದ ನಾಮನಿರ್ದೇಶನಗೊಂಡು ಬರುವವರಿಂದ ಸಂಸ್ಥೆಯ ಬೆಳವಣಿಗೆಗೆ ಕಷ್ಟವಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಆರ್ಥಿಕ ಅಪರಾಧವಾದಾಗ ಸರ್ಕಾರ ನಿಯಂತ್ರಣ ಮಾಡಬಹುದು. ಬೇರೆ ವಿಷಯಗಳ ಸಂದರ್ಭದಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ.ಸಹಕಾರ ಚಳುವಳಿಯಲ್ಲಿ ಏರುಪೇರಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ನಾಮನಿರ್ದೇಶನ ಸೂಕ್ತವಲ್ಲವೆಂಬ ಅಭಿಪ್ರಾಯವನ್ನು ಈಗಾಗಲೇ ಸರ್ಕಾರದ ಗಮನಸೆಳೆದಿದ್ದೇವೆ. ಮುಂದೆಯೂ ನಾವೆಲ್ಲ ಹೋಗಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಸಹಕಾರಿ ಕ್ಷೇತ್ರ ರೈತರ ಹೃದಯ ಇದ್ದಂತೆ. ಸಹಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇದ್ದರೆ ಯಾವತ್ತೂ ಅಳಿವಿಲ್ಲ ನಮ್ಮ ಮಕ್ಕಳಿಗೆ ಸಹಕಾರಿ ಸಂಘದ ಆಸಕ್ತಿ ಬರುವ ಹಾಗೆ ಮಾಡಬೇಕು. ರಾಜ್ಯದ ಏಳೆಂಟು ಜಿಲ್ಲೆಯಲ್ಲಿ ಮಾತ್ರ ಸಹಕಾರ ಚಳುವಳಿ ಉತ್ತಮವಾಗಿದೆ. ಶಿರಸಿಯು ಮಾದರಿ ಸಹಕಾರ ಕೇಂದ್ರವಾಗಿದ್ದು, ಶಿರಸಿ ಪ್ರಧಾನವಾಗಿಸಿರಿಸಿಕೊಂಡು ಸಿದ್ದಾಪುರ, ಯಲ್ಲಾಪುರ ಕ್ಷೇತ್ರ ಬೆಳೆದಿದೆ ಎಂದರು.
ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ಸುವರ್ಣ ಸಹಕಾರ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ ಸಹಕಾರಿ ಕ್ಷೇತ್ರ ಇಂದು ವಿಸ್ತಾರವಾಗಿದೆ. ಸಂಘದಲ್ಲಿ ವಿಶ್ವಾಸ ಮುಖ್ಯ. ಕಾನೂನು ಪುಸ್ತಕ ಏನೇ ಹೇಳಿದರೂ ಇಲ್ಲಿ ನಂಬಿಗೆಯೂ ಅಷ್ಟೇ ಮಹತ್ವದ್ದಾಗಿದೆ. ಸರ್ಕಾರದ ಹಸ್ತಕ್ಷೇಪ ಸಹಕಾರಿ ಸಂಘಗಳ ಮೇಲೆ ಉಂಟಾದರೆ ಸಂಘದ ಅಸ್ಥಿತ್ವಕ್ಕೆ ಧಕ್ಕೆ ಬರುತ್ತದೆ. ಸಹಕಾರಿ ಸಂಘಗಳು ಎಲ್ಲವೂ ಒಂದಾಗಿ ಸದಸ್ಯರ ಸಮಸ್ಯೆಗೆ ಸ್ಪಂದಿಸುವ ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.ಸಂಘದ ಅಧ್ಯಕ್ಷ ಮಂಜುನಾಥ ಜೋಶಿ ಈರಗೊಪ್ಪ ಅಧ್ಯಕ್ಷತೆ ವಹಿಸಿ ಸಂಘದ ಸದಸ್ಯರಿಗೆ ಸುವರ್ಣ ಸಂಭ್ರಮದ ಅಂಗವಾಗಿ ನೀಡುವ ಕಿರುಕಾಣಿಕೆ ಬಿಡುಗಡೆ ಮಾಡಿದರು.
ಪ್ರಮುಖರಾದ ಎಸ್.ಕೆ.ಭಾಗ್ವತ್, ಲೆಕ್ಕಪರಿಶೋಧಕ ಎಂ.ಎಸ್.ಶೆಟ್ಟಿ, ಎಂ.ಎನ್.ಭಟ್ಟ ಬಿಸಲಕೊಪ್ಪ, ಸಿ.ಎನ್.ಹೆಗಡೆ ತಂಗಾರಮನೆ, ಸಂಘದ ಉಪಾಧ್ಯಕ್ಷ ರಾಮಚಂದ್ರ ಹೆಗಡೆ ಕಲ್ಕಟ್ಟೆ, ಜಿ.ಆರ್.ಹೆಗಡೆ, ಹಳದೋಟ ಹಾಗೂ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸ್ಮರಣ ಸಂಚಿಕೆ ಕುರಿತು ಕೆ.ಆರ್.ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಆರ್.ಆರ್.ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಪಾದ ವಿ.ಹೆಗಡೆ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಎನ್.ಹೆಗಡೆ ವರದಿ ವಾಚಿಸಿದರು. ಎಂ.ಡಿ.ಭಟ್ಟ ವಂದಿಸಿದರು. ರಮೇಶ ಹೆಗಡೆ ಕಿಬ್ಬಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಜಯರಾಂ ಭಟ್ಟ ವೇದಘೋಷ ಮಾಡಿದರು. ವಿ.ಎಸ್.ಹೆಗಡೆ ಪ್ರಾರ್ಥಿಸಿದರು.