Slide
Slide
Slide
previous arrow
next arrow

ಸಚ್ಚಿಷ್ಯ, ಸಮಾಜ ನಮ್ಮ ಎರಡು ಕಣ್ಣುಗಳು; ಸ್ವರ್ಣವಲ್ಲೀ ಶ್ರೀ

300x250 AD

ಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ || ಧರ್ಮ ಆಚರಣ ಪ್ರಧಾನವೆಂದ ಯತಿಗಳು

ಶಿರಸಿ: ಸಚ್ಚಿಷ್ಯ ಹಾಗು ಸಮಾಜ ಇವೆರಡು ನಮ್ಮ ಕಣ್ಣುಗಳಿದ್ದಂತೆ. ಎರಡಕ್ಕೂ ಸಮಾನ ಮಾರ್ಗದರ್ಶನ ಮಾಡುವ ಪ್ರಯತ್ನ ಸದಾ ನಮ್ಮಿಂದಾಗುತ್ತದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು ನುಡಿದರು.

ಅವರು ಗುರುವಾರ ಸ್ವರ್ಣವಲ್ಲೀಯಲ್ಲಿ ನಡೆದ ಶಿಷ್ಯ ಸ್ವೀಕಾರ ಮಹೋತ್ಸವದ ಸಮಾರೋಪ ದಿನದ ಧರ್ಮಸಭೆಯಲ್ಲಿ ಆಶೀರ್ವದಿಸಿದರು. ಇದೀಗ ನೂತನ ಯತಿಗಳಾಗಿರುವ ನಮ್ಮ ಸಚ್ಚಿಷ್ಯರಿಗೆ ತಮ್ಮಲ್ಲಿರುವ ಸರ್ವಸ್ವವನ್ನೂ ಧಾರೆಯೆರೆಯಲು ಸಿದ್ಧರಿದ್ದೇವೆ. ಸೂಕ್ತ ವಯಸ್ಸಿನ ನಿವೃತ್ತಿಯಲ್ಲೊಂದು ಸಾರ್ಥಕತೆಯಿದೆ. ಶಿಷ್ಯರಿಗೆ ಸಂಪೂರ್ಣ ಮಾರ್ಗದರ್ಶನ ಮಾಡುವೆ ಎಂದರು.

ಶಿಷ್ಯ ಸ್ವೀಕಾರ ಮಹೋತ್ಸವವು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂಥದ್ದು. ಹಾಗಾಗಿ ನೂತನ ಶಿಷ್ಯರಿಗೆ ಸಂತೃಪ್ತಿಯಾಗಬೇಕು, ಯಾವುದೂ ಕೊರತೆ ಎನಿಸಬಾರದು ಎಂಬುದು ನಮ್ಮ ಮಹದಾಸೆಯಾಗಿತ್ತು. ಅದರಂತೆಯೇ ನಡೆದಿದೆ. ಎಲ್ಲ ಯತಿಗಳ‌ ಆಗಮನದಿಂದ ಜೀವ ತುಂಬಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳಾಡಿದ ಅವರು, ಮನೆಯಲ್ಲಿ ಹೇಗೆ ಪುತ್ರೋತ್ಸವ ನಡೆಯುತ್ತದೆಯೋ ಅದೇ ರೀತಿ ಮಠದಲ್ಲಿ ಶಿಷ್ಯೋತ್ಸವು ಕೂಡ. ಇಲ್ಲಿ ವಿವಿಧೆಡೆಯಿಂದ ಆಗಮಿಸಿದ ಯತಿಗಳೇ ನೆಂಟರು. ಈ ಶಿಷ್ಯ ಮಹೋತ್ಸವವು ನಮಗೊಂದು ವಿಶೇಷ ಕಾರ್ಯಕ್ರಮ ಎಂದರು.

ಆಧ್ಯಾತ್ಮಕತೆಯ ಜೊತೆಗೆ ಲೌಕಿಕತೆ ತೋರಿಸಿಕೊಡಲು ಮಠದ ಅವಶ್ಯಕತೆ ಇದೆ. ಆದರೆ ನಾವು ಆಧ್ಯಾತ್ಮಕತೆಗ ಹೆಚ್ಚಿನ ಒತ್ತು ನೀಡಬೇಕಿದೆ. ಧರ್ಮವನ್ನು ನಾವು ಆಚರಿಸಿ ಮತ್ತೊಬ್ಬರಿಗೆ ಬೋಧನೆ ಮಾಡಬೇಕು. ಸ್ವತಃ ಆಚರಣೆಯೇ ಪಾಠವಾಗಬೇಕು. ಧರ್ಮ ಆಚರಣ ಪ್ರಧಾನ, ಪ್ರವಚನ ಪ್ರಧಾನವಾದುದಲ್ಲ. ಆಚಾರ್ಯ ಶಂಕರರ ವಿಚಾರದಂತೆ, ತತ್ವಜ್ಞಾನವನ್ನು ಪಡೆದು, ಶಿಷ್ಯಹಿತಕ್ಕೆ ಚಿಂತಿಸುವವನು ಗುರು ಎನಿಸಿಕೊಳ್ಳುತ್ತಾನೆ. ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಷಯಗಳ ನಡುವೆ ಸಮನ್ವಯ ಸಾಧಿಸುವುದು ಇಂದಿನ ಅಗತ್ಯತೆ. ಶಿಷ್ಯರ ಕಾರಣಕ್ಕೆ ಶ್ರೀಮಠ ಇಂದು ಬೆಳೆದಿದೆ ಎಂದು ಅವರು ನುಡಿದರು.

ಎಡತೋರೆ ಶ್ರೀಶಂಕರ ಭಾರತೀ‌ ಮಹಾ ಸ್ವಾಮೀಜಿ ಆಶೀಋವದಿಸಿ, ಗ್ರಂಥಗಳು ಕೇವಲ ಬಿಡುಗಡೆಯಾದರೆ ಪ್ರಯೋಜನವಿಲ್ಲ, ಸಮಾಜದ ಜನರು ಅದನ್ನು ಓದಿ, ಅನುಷ್ಠಾನಕ್ಕೆ ಬಂದಾಗ ಮಾತ್ರ ಅದು ಸಾರ್ಥಕ ಎನಿಸುತ್ತದೆ. ಅದ್ವೈತ ಶಬ್ಧದ ಅರ್ಥ ಆನಂದ ಎಂದಾಗಿದೆ. ಶಂಕರರ ಪ್ರತಿಪಾದನೆಯಂತೆ ಸಂನ್ಯಾಸಾಶ್ರಮದ ಉದ್ಧೇಶವೇ ಆನಂದವನ್ನು ಪಡೆಯುವುದಾಗಿದೆ ಎಂದರು.

ಹರಿಹರ ಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸ್ವರೂಪಿ‌ ಮಹಾ ಸ್ವಾಮೀಜಿ,‌ ನಮಗೆ ಮತ ಹಾಗು ಧರ್ಮದ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಜೋಡಿಸುವುದು ಧರ್ಮ. ಮತೀಯ ವಿಚಾರಗಳನ್ನು ನಂಬುವುದು ಮತ ಎನಿಸಿಕೊಳ್ಳುತ್ತದೆ. ಪ್ರಪಂಚದ ಎಲ್ಲ ಮತಗಳಿಗೆ ಮೂಲ ಸನಾತನ ಹಿಂದೂ ಧರ್ಮ. ದೇಶ, ಕಾಲದ ಜೊತೆಗೆ ಧರ್ಮದ ಉಳಿವಿಗೆ ಸಾಗಬೇಕು. ನಮ್ಮಲ್ಲಿ ಸ್ವಾಭಿಮಾನ, ಹೋರಾಟದ ಸ್ವಭಾವ ಇಲ್ಲದಿದ್ದಲ್ಲಿ ಧರ್ಮ ಉಳಿಸಿಕೊಳ್ಳಲು ಅಸಾಧ್ಯ. ಭಾರತೀಯ ಸಂಸ್ಕೃತಿಯ ಮೂಲ‌ ಇರುವುದು ಕುಟುಂಬಗಳಲ್ಲಿದೆ. ಸಮಷ್ಠಿ ಹಿತ ಚಿಂತನೆಯತ್ತ ನಾವು ಸಾಗಬೇಕು. ಸಮಾಜವನ್ನು ಗಟ್ಟಿಗೊಳಿಸಲು ಅದ್ವೈತ ಪರಂಪರೆಯಿಂದ ಮಾತ್ರ ಸಾಧ್ಯ ಎಂದರು.

300x250 AD

ಬೆಂಗಳೂರಿನ‌ ಕೂಡ್ಲಿ ಶೃಂಗೇರಿ‌ ಮಠದ ವಿದ್ಯಾವಿಶ್ವೇಶ್ವರ ಭಾರತೀ ‌ಮಹಾ‌ ಸ್ವಾಮೀಜಿ ಆಶೀರ್ವದಿಸಿ, ಇವತ್ತಿನ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಸ್ವರ್ಣವಲ್ಲೀ ಮಠ ಕೇವಲ ಕಲ್ಲು-ಕಟ್ಟಿಗೆಯಿಂದ ನಿರ್ಮಿತವಾಗಿಲ್ಲ, ಬದಲಾಗಿ ಪರಮ ಪೂಜನೀಯ ಶ್ರೀಗಳ ತಪಃಶಕ್ತಿಯಿಂದ ಕಟ್ಟಲ್ಪಟ್ಟಿದೆ ಎಂದರು.

ಹೊಳೆ‌ನರಸೀಪುರದ ಶ್ರೀಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ ಆಶೀರ್ವದಿಸಿ, ಶಂಕರರದ್ದು ಜ್ಞಾನಾವತಾರ. ಕಲಿಯುಗದಲ್ಲಿ ಶಂಕರರ ಜ್ಞಾನವೇ ಆಯುಧವಾಗಬೇಕು. ಈ ಕಾಲದಲ್ಲಿ ಶಂಕರರ ಉಪದೇಶ ಅತ್ಯಾವಶ್ಯಕ. ಒಳ್ಳೆಯದಕ್ಕೆ‌ ಸದಾ ಸಹಕರಿಸುವ ಮನಸ್ಥಿತಿ ನಮ್ಮದಾಗಬೇಕು. ಧರ್ಮ ಉಳಿದು, ಬೆಳೆಯಬೇಕು. ಶಿಕ್ಷಣದಲ್ಲಿ ಹಿಂದೂ ವಿಚಾರ, ಚಿಂತನೆ ಆಚರಣೆಯಲ್ಲಿ ಹೆಚ್ಚು ಹೆಚ್ಚು ಬರಬೇಕು ಎಂದರು.

ಶ್ರೀಮನ್ನೆಲಮಾವು ಮಠದ ಶ್ರೀಮಾಧವಾನಂದ‌ ಭಾರತೀ‌‌ ಮಹಾ‌ ಸ್ವಾಮೀಜಿ,
ಸಂನ್ಯಾಸಾಶ್ರಮದಲ್ಲಿ ಸಾಧಿಸಲು ಮನಸ್ಸಿನ ನಿಯಂತ್ರಣ ಅವಶ್ಯಕ. ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಅಸಾಧ್ಯ. ಜ್ಞಾನಮಾರ್ಗದಲ್ಲಿಯೇ ಮೋಕ್ಷ ಸಾಧಿಸಬೇಕು. ಹಸಿರು ಸ್ವಾಮಿಗಳು ಸ್ವರ್ಣವಲ್ಲೀಯಲ್ಲಿಂದು ನೂತನ ಶಿಷ್ಯರ ರೂಪದಲ್ಲಿ ಹಸಿರು ಗಿಡವೊಂದನ್ನು ನೆಟ್ಟಿದ್ದಾರೆ. ಆ ಗಿಡ ಬೃಹದಾಗಿ ಬೆಳೆದು, ಹೆಮ್ಮರವಾಗಿ ಸಮಾಜಕ್ಕೆ ಮಾರ್ಗದರ್ಶನ ರೂಪದಲ್ಲಿ ನೆರಳನ್ನು ನೀಡುವಂತಾಗಲಿ ಎಂದರು.

ಶಿಷ್ಯ ಸ್ವೀಕಾರ ಮಹೋತ್ಸವದಲ್ಲಿ ನೂತನ ಯತಿಗಳಾಗಿರುವ ಶ್ರೀ ಆನಂದಬೋಧೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಮನುಷ್ಯ ಜನ್ಮ ಅತ್ಯಂತ ದುರ್ಲಬ ಎಂದು ಶಾಸ್ತ್ರ ಹೇಳುತ್ತದೆ. ಮನುಷ್ಯ ಜನ್ಮದ ಗುರಿ ಮೋಕ್ಷ ಹೊಂದುವುದು ಆಗಿರಬೇಕು. ಆ ಮುಕ್ತಿಯು ಗುರುಭಕ್ತಿಯಿಂದ, ದೈವಭಕ್ತಯಿಂದ ದೊರಕುವಂತದ್ದು. ಗುರುಭಕ್ತಿ ಹೆಚ್ಚಿಸಿಕೊಳ್ಳಬೇಕು. ಗುರು, ಭಗವಂತನ ದರ್ಶನಕ್ಕಾಗಿ ವ್ಯಾಖುಲತೆ ಬೆಳೆಸಿಕೊಳ್ಳಬೇಕು. ಸದ್ಗುರುಗಳ ಕೃಪೆ ಬಕಾರಣಕ್ಕೆ ನಮ್ಮ ಜನ್ಮ ಸಾರ್ಥಕ ಎನಿಸಿದೆ.

ಸಂನ್ಯಾಸಾಶ್ರಮದಲ್ಲಿ ಧರ್ಮ ಪಾಲನೆಗೆ ಹೆಚ್ಚು ಆದ್ಯತೆ ನೀಡಬೇಕು. ಭಗವತ್ ಸಾಕ್ಷಾತ್ಕಾರಕ್ಕೆ ಲೋಕ ಕಲ್ಯಾಣಕ್ಕೆ ಪರಮ ಪೂಜನೀಯ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಸಾಗುವುದಾಗಿ ತಿಳಿಸಿದರು. ಶ್ರೀಮಠವನ್ನು ಹಿರಿಯರಂತೆಯೇ ಸೂಕ್ರ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದಾಗಿ ಹೇಳಿದ ಅವರು, ಮಠದ ಶಿಷ್ಯ ಸಂಪರ್ಕ ನಮ್ಮೊಂದಿಗೂ ಇದೇ ರೀತಿಯಿಂದಿರಲಿ. ಸ್ವರ್ಣವಲ್ಲೀಯಲ್ಲಿನ ಧರ್ಮದ ಸುಗಂಧವನ್ನು ಆಘ್ರಾಹಿಸಲು ಮಠದೆಡೆಗೆ ಭಕ್ತರು ಹೆಚ್ಚು ಆಗಮಿಸಬೇಕು ಎಂದು ಅವರು ನುಡಿದರು.

ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ನಡೆದ ಐದು ದಿನಗಳ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಮಠಕ್ಕೆ ಭೇಟಿ ನೀಡಿದರು. ಸಾವಿರಾರು ಕಾರ್ಯಕರ್ತರು ತಮ್ಮ ಸೇವೆಯನ್ನು ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮಗಳು, ಊಟೋಪಚಾರ, ಪಾರ್ಕಿಂಗ್, ಪೆಂಡಾಲ್ ವ್ಯವಸ್ಥೆ ಹೀಗೆ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಯಲ್ಲಾಪುರ, ಶಿರಸಿ, ಸಿದ್ದಾಪುರ ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದಲೂ ಭಕ್ತರು ಆಗಮಿಸಿ, ಶಿಷ್ಯ ಸ್ವೀಕಾರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮಠದ ಸಮೀಪ 25ಕ್ಕೂ ಅಧಿಕ ಸ್ಟಾಲ್’ಗಳನ್ನು ನಿರ್ಮಿಸಲಾಗಿತ್ತು.‌ ಅದರಲ್ಲಿ ಮಠದ ವಿವಿಧ ಸೀಮೆಗಳ ಭಕ್ತರಿಗಾಗಿ ಹಾಗೂ ವಿವಿಧ ಅಂಗಡಿಗಳಿಗೆ ಮೀಸಲು ಇಡಲಾಗಿತ್ತು. ಮುಖ್ಯ ವೇದಿಕೆ ಬಳಿ ಮಠದ ಭಗವತ್ಪಾದ ಪ್ರಕಾಶದ ಪುಸ್ತಕ ಮಾರಾಟ ಮಳಿಗೆಯನ್ನು ತೆರೆಯಲಾಗಿತ್ತು.

ಶ್ರೀಆನಂದಬೋಧೇಂದ್ರ ಶ್ರೀಗಳದ್ದು ಆರು ಪರ್ವಗಳ ದಂಡ. ಆರು ಅಕ್ಷರಗಳ ಹೆಸರು. ಆರು ವೈರಿಗಳನ್ನೂ ಗೆದ್ದು ನಿಲ್ಲುವ ಮನಸ್ಥಿತಿ. – ಸ್ವರ್ಣವಲ್ಲೀ ಶ್ರೀ

Share This
300x250 AD
300x250 AD
300x250 AD
Back to top