ಕಾರವಾರ- ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಲಭ್ಯವಿರುವ ಕಾಮಗಾರಿ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಜಾಗೃತಿಗೊಳಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ನಾಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಕೇರಿ ಹಾಗೂ ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ರೋಜಗಾರ ದಿವಸ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ನರೇಗಾ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ಮಾತನಾಡಿ, ಕೂಲಿ ಕೆಲಸಕ್ಕಾಗಿ ಜನರು ಗುಳೆ ಹೋಗುವುದನ್ನು ತಪ್ಪಿಸುವಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಸಹಕಾರಿಯಾಗಿದೆ. ಪ್ರತಿ ಗ್ರಾಮದ ಕೂಲಿಕಾರರಿಗೆ ಸ್ವಂತ ಗ್ರಾಮದಲ್ಲಿಯೇ ಗ್ರಾಮ ಪಂಚಾಯತಿಯಿಂದ ಸಮುದಾಯ ಕಾಮಗಾರಿಯಲ್ಲಿ ನರೇಗಾದಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಜೊತೆಗೆ ದನದ ಕೊಟ್ಟಿಗೆ, ಕುರಿ, ಕೋಳಿ, ಮೇಕೆ, ಹಂದಿ ಶೆಡ್, ಕೊಳವೆ ಬಾವಿ ಮರುಪೂರಣ ಘಟಕ, ಕೃಷಿ ಹೊಂಡ, ಬಾವಿ ನಿರ್ಮಾಣ ಸೇರಿದಂತೆ ಅಡಿಕೆ, ಪಪ್ಪಾಯಿ, ಚಿಕ್ಕು, ಪೇರಲ, ದಾಳಿಂಬೆ, ಡ್ರ‍್ಯಾಗನ್ ಫ್ರೂಟ್‌ನಂತಹ ವಿವಿಧ ತೋಟಗಾರಿಕೆ ಬೆಳೆಗಳನ್ನ ವೈಯಕ್ತಿಕ ಕಾಮಗಾರಿ ವಿಭಾಗದಲ್ಲಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಸ್ವಂತ ಊರಲ್ಲಿ ಗ್ರಾಮ ಪಂಚಾಯತಿಯಿಂದ ನರೇಗಾದಡಿ ಸಿಗುವ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಧೃಢರಾಗಲು ಅವಕಾಶವಿದ್ದು, ನರೇಗಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಲಭ್ಯವಿರುವ ಸೌಲಭ್ಯಗಳಾದ ಹೆಣ್ಣು-ಗಂಡಿಗೆ ಸಮಾನ ಕೂಲಿ, 60 ವರ್ಷ ಮೇಲ್ಪಟ್ಟ ಹಾಗೂ ವಿಕಲ ಚೇತನರು, ಗರ್ಭಿಣಿ-ಬಾಣಂತಿಯರಿಗೆ ಕೆಲಸದಲ್ಲಿ ಸಿಗುವ ರಿಯಾಯಿತಿ, ನೀರು, ನೆರಳು, ಪ್ರಥಮ ಚಿಕಿತ್ಸೆ, ಕೂಲಿಕಾರರ ಮಕ್ಕಳ ಆರೈಕೆಗಾಗಿ ಪ್ರಾರಂಭವಾಗುತ್ತಿರುವ ಕೂಸಿನ ಮನೆ(ಶಿಶು ಪಾಲನಾ ಕೇಂದ್ರ)ಗಳ ಮಹತ್ವದ ಕುರಿತು ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗನೂರು ಗ್ರಾಪಂ ಸದಸ್ಯ ಸೋಮಣ್ಣ ಬಿಸಗಣ್ಣವರ, ಪಿಡಿಒ ಶಂಭು ಸಿಂಗನಹಳ್ಳಿ, ಟಿಸಿ ಅಲೋಕ ನಾಯ್ಕ, ಟಿಎಇ ತುಳುಜಾ ಗೊಂದಕರ, ಡಿಇಒ ಸಂದೇಶ, ಮೇಟ್ ಪ್ರಭಾವತಿ, ಬಸವರಾಜ್, ಮತ್ತಿತ್ತರರು ಉಪಸ್ಥಿತರಿದ್ದರು.