ಶಿರಸಿ: ವೃತ್ತಿಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಭೌತಿಕ, ಮಾನಸಿಕ, ದೈಹಿಕ ಸ್ಥೈರ್ಯ ಹೆಚ್ಚಿಸುತ್ತದೆ. ಕ್ರೀಡೆಯಿಂದ ಸಂಘಟನೆ ಬೆಳೆಸಿಕೊಳ್ಳುವ ಸಾಮರ್ಥ್ಯವಿದೆ. ಶಿರಸಿ ವಕೀಲರು ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವುದು ಪ್ರಶಂಶೆಯ ಕಾರ್ಯ ಎಂದು ಹಿರಿಯ ನ್ಯಾಯಾಧೀಶರಾದ ಕಮಲಾಕ್ಷ ಡಿ. ಹೇಳಿದರು.
ಅಂಕೋಲೆಯಲ್ಲಿ ಫೇ.18ರಂದು ಜರುಗಿದ ಜಿಲ್ಲಾ ಮಟ್ಟದ ವಕೀಲರ ಕ್ರಿಕೇಟ್ ಪಂದ್ಯಾಟದಲ್ಲಿ ಚಾಂಪಿಯನ್ ತಂಡವಾಗಿರುವ ಶಿರಸಿ ವಕೀಲ ತಂಡಕ್ಕೆ, ಶಿರಸಿ ವಕೀಲ ಸಂಘದ ಕಾರ್ಯಾಲಯದಲ್ಲಿ ಜರುಗಿದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮೇಲಿನಂತೆ ಹೇಳಿದರು.
ವಕೀಲ ತಂಡದ ಯಶಸ್ಸು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. ಇಂತಹ ಯಶಸ್ಸುಗಳು ಪುನರಾವರ್ತನೆಯಾಗಲಿ. ನ್ಯಾಯಾಲಯದ ಸಿಬ್ಬಂದಿಗಳಿಗೆ ಮುಂದಿನ ದಿನಗಳಲ್ಲಿ ಕ್ರಿಕೇಟ್ ಪಂದ್ಯಾಟ ಜರುಗಲಿದ್ದು, ಈ ದಿಶೆಯಲ್ಲಿ ಶಿರಸಿ ನ್ಯಾಯಾಲಯದ ಸಿಬ್ಬಂದಿಗಳ ಸಮರ್ಥ ತಂಡ ಕಟ್ಟಲು ಪ್ರಯತ್ನದಲ್ಲಿದ್ದೇವೆ ಎಂದು ನ್ಯಾಯಾಧೀಶರಾದ ರಾಜು ಶೇಡ್‌ಬಾಳ್ಕರ್ ಹೇಳಿದರು.
ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ, ಸ್ಫರ್ಧೆ ಮುಖ್ಯ, ಶಿರಸಿ ವಕೀಲ ತಂಡ ಕ್ರೀಡಾ ಮನೋಭಾವನೆಯಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ನ್ಯಾಯಾಧೀಶ ಅಭಿಷೇಕ್ ಜೋಶಿ ಹೆಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನ ವಕೀಲ ಸಂಘದ ಅಧ್ಯಕ್ಷ ಈ.ಎಫ್ ಈರೇಶ್ ವಹಿಸಿ ಸ್ವಾಗತಿಸಿದರು. ಹಿರಿಯ ವಕೀಲರಾದ ಎನ್.ಎಸ್ ಹೆಗಡೆ ಲಿಂಗದಕೋಣ ಅಭಿನಂದನಾ ಭಾಷಣ ಮಾಡಿದರು. ಕ್ರೀಕೇಟ್ ತಂಡದ ನಾಯಕ ರವೀಂದ್ರ ನಾಯ್ಕ ಮಾತನಾಡಿದರು. ಹಿರಿಯ ವಕೀಲ ಎಸ್.ಎನ್. ನಾಯ್ಕ ಪಂದ್ಯಾಟದಲ್ಲಿ ಗೆಲುವಿನ ವಿವರ ನೀಡಿದರು. ಸಂಘದ ಜಂಟಿ ಕಾರ್ಯದರ್ಶಿ ರಾಜೀವ್ ರೇವಣಕರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಆರ್.ವಿ ಹೆಗಡೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.