ಜೊಯಿಡಾ: ಕರ್ನಾಟಕ ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ತಾಲೂಕು ಕೇಂದ್ರದಲ್ಲಿರುವ ದುರ್ಗಾದೇವಿ ಮೈದಾನದಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ ಮಾತನಾಡಿ, ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಕಳೆದ 30 ವರ್ಷಗಳಿಂದ ಅನ್ಯಾಯ ಮಾಡಲಾಗಿದೆ. ಬೃಹತ್ ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಮಾಡಿದರೂ ಉಪಯೋಗಕ್ಕೆ ಬಂದಿಲ್ಲ. ನಿಯೋಗಗಳ ಮೂಲಕ ಮನವಿ ನೀಡಿದರೂ ಕಾಟಾಚಾರಕ್ಕೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ನಿಲ್ಲುವುದಿಲ್ಲ. ಲೋಕಸಭೆ ಚುನಾವಣೆ ಬಹಿಷ್ಕಾರ ನಿರ್ಣಯ ಅನಿವಾರ್ಯವಾಗಲಿದೆ ಎಂದರು.
ಕುಣಬಿ ಸಮಾಜದ ತಾಲೂಕು ಅಧ್ಯಕ್ಷ ಅಜಿತ್ ಮಿರಾಶಿ ಮಾತನಾಡಿ, ನ್ಯಾಯಕ್ಕಾಗಿ ಹೋರಾಟ ನಿರಂತರ ಮುಂದುವರಿಯುತ್ತದೆ. ಯಾವುದೇ ಸರಕಾರ ನಮ್ಮ ಹೋರಾಟ ಹಗುರವೆಂದು ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.ನಮ್ಮ ರಾಜ್ಯದ ಕುಣಬಿ ಸಮುದಾಯದವರಿಗೆ ಗೋವಾ ರಾಜ್ಯದಂತೆ ಪರಿಶಿಷ್ಟ ಪಂಗಡದ ಸ್ಥಾನ ಮಾನ ಸಿಗಬೇಕಾಗಿದೆ ಎಂದು ಗ್ರಾಮ ಪಂಚಾಯ್ತು ಸದಸ್ಯರಾದ ಅರುಣ್ ಕಾಮ್ರೇಕರ ಆಗ್ರಹಿಸಿದರು.
ರಾಜಕೀಯ ಪಕ್ಷಗಳಿಗೆ ಚುನಾವಣೆ ಬಂದಾಗ ಮಾತ್ರ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನೆನಪಾಗುತ್ತದೆ. ನಾವುಗಳು ಚುನಾವಣೆಗೆ ಮಾತ್ರ ಸೀಮಿತವಾಗಿದೆ ಎಂದು ಯಲ್ಲಾಪುರ ತಾಲೂಕಿನ ಕುಣಬಿ ಸಮಾಜದ ಅಧ್ಯಕ್ಷರಾದ ನಾರಾಯಣ ಅವರು ಹೇಳಿದರು.
ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ದೇವಿದಾಸ ದೇಸಾಯಿ, ಸುಭಾಷ್ ಮಾಂಜ್ರೇಕರ, ಸಂತೋಷ ಸಾವಂತ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿಯವರ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ನೀಡಲಾಯಿತು. ಮನವಿಯಲ್ಲಿ ಪರಿಶಿಷ್ಟ ಪಂಗಡದ ಸ್ಥಾನ ಮಾನ ನೀಡದಿದ್ದರೆ ಉಗ್ರ ಪ್ರತಿಭಟನೆ ಮತ್ತು ಚುನಾವಣೆ ಬಹಿಷ್ಕಾರ ಅನಿವಾರ್ಯ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕುಣಬಿ ಪ್ರಮುಖರಾದ ಲಕ್ಷ್ಮಣ ಗಾಂವಕರ, ರಾಜ್ಯ ಕಾರ್ಯದರ್ಶಿ, ಚಂದ್ರಿಮಾ ಮಿರಾಶಿ, ಮಾಬಳು ಕುಕಡಲಕರ, ಚಂದ್ರಶೇಖರ ಸಾವರ್ಕರ್, ರವಿ ಮಿರಾಶಿ, ಬುಧೊ ಕಾಲೇಕರ, ಪ್ರೇಮಾನಂದ ವೆಳಿಪ, ಸೋಮಣ್ಣ ಹನ್ನೋಲಕರ, ಸುಭಾಷ್ ವೆಳಿಪ್, ಪ್ರಸನ್ನ ಗಾವಡಾ, ಶುಭಾಂಗಿ ಗಾವಡಾ, ಸುಷ್ಮಾ ಮಿರಾಶಿ, ಪ್ರಕಾಶ್ ವೆಳಿಪ್, ನಾರಾಯಣ ಕುಣಬಿ, ಪುಟ್ಟಾ ಕುಣಬಿ, ಮಾಬಳೇಶ್ವರ ಕುಣಬಿ, ವಿಷ್ಣು ಭಿರಂಗತ್ ಮುಂತಾದವರು ಇದ್ದರು. ಪಿ.ಎಸ್.ಐ ಮಹೇಶ್ ಮಾಳಿ ಪೋಲಿಸ್ ಬಂದೋಬಸ್ತ್ ಒದಗಿಸಿದ್ದರು.