ಜೋಯಿಡಾ: ತಾಲ್ಲೂಕು ಕೇಂದ್ರದಲ್ಲಿರುವ ಕನ್ನಡ ಭವನದಲ್ಲಿ ಜಿಲ್ಲೆಯ ಹೆಸರಾಂತ ಸಾಹಿತಿ ದಿ.ವಿಷ್ಣು ನಾಯ್ಕ ಅವರಿಗೆ ಶ್ರದ್ಧಾಂಜಲಿಯನ್ನು ಸೋಮವಾರ ಸಲ್ಲಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ದಿ.ವಿಷ್ಣು ನಾಯ್ಕರ ಭಾವಚಿತ್ರಕ್ಕೆ ಪುಷ್ಪಗೌರವವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ.ಸಾ.ಪ ತಾಲೂಕು ಅಧ್ಯಕ್ಷ ಪಾಂಡುರಂಗ ಪಟಗಾರ ಅವರು ವಿಷ್ಣು ನಾಯ್ಕ ಅವರು ಮಹಾನ್ ಸಾಹಿತಿ, ಕವಿ, ಕಾದಂಬರಿಕಾರ, ಸಂಪಾದಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಉತ್ತುಂಗಕ್ಕೆ ಏರಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದವರು. ಇಂತಹ ವ್ಯಕ್ತಿಗಳ ಅಗಲುವಿಕೆ ನಮ್ಮ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಮಾತನಾಡುತ್ತಾ, ನಮ್ಮ ಜಿಲ್ಲೆ ಕಂಡ ಮೇರು ವ್ಯಕ್ತಿತ್ವದ ಕವಿ, ಸಾಹಿತಿ, ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ಯುವ ಜನತೆಗೆ, ಮಾರ್ಗದರ್ಶಕರಾಗಿ ಸಾಹಿತ್ಯ ಲೋಕವನ್ನು ಕೈಹಿಡಿದು ಬೆಳೆಸಿದ ಮಹಾನ್ ಸಾಹಿತಿ ವಿಷ್ಣು ನಾಯ್ಕ ಅವರ ಅಗಲಿಕೆ ಜಿಲ್ಲೆಗೆ ಅಪಾರ ನೋವನ್ನು ತಂದಿದೆ. ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದರು.
ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ, ವಿಷ್ಣು ನಾಯ್ಕ ಅವರ ಸಾಹಿತ್ಯ ಕೃತಿಗಳು ಅವರನ್ನು ನಮ್ಮ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಸಲಿದೆ. ಇವರ ಸಾಹಿತ್ಯ ಮುಂದಿನ ಯುವಪೀಳಿಗೆಗೆ ಮಾರ್ಗದರ್ಶಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕ.ಸಾ.ಪ. ಕಾರ್ಯದರ್ಶಿಗಳಾದ ಭಾಸ್ಕರ ಗಾಂವಕರ, ಪ್ರೇಮಾನಂದ ವೇಳಿಪ, ಪ್ರಮುಖರಾದ ಕೆ.ಎಸ್.ಟೋನ್ನಿ, ಮಹಾದೇವ ಹಳದನಕರ, ಮೂಖ್ಯೋಪಾಧ್ಯಾಯರಾದ ಸಂಗಮೇಶ ಮಾದರ, ಎಸ್.ಬಿ. ಶಿಂದೆ, ಸಚಿನ್ ತಳೇಕರ, ಈಶ್ವರ ನಾಯ್ಕ, ರತನ್ ವೇಳಿಪ, ಶಾಂತಾ ವೇಳಿಪ ಮುಂತಾದವರು ಉಪಸ್ಥಿತರಿದ್ದರು.