ದಾಂಡೇಲಿ : ಹಿಂದೆಂದೂ ಕಂಡರಿಯದ ರೀತಿಯಲ್ಲಿ ದಾಂಡೇಲಿ ನಗರಸಭೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕಾರಣ ಇಷ್ಟೇ, ನಗರಸಭೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಇಂದು ರವಿವಾರ ನಗರದ ಹಳಿಯಾಳ ರಸ್ತೆಯಿಂದ ಅದ್ದೂರಿ ಹಾಗೂ ವೈಭವದ ಮೆರವಣಿಗೆಯ ಮೂಲಕ ನಗರ ಸಭೆಯ ಆವರಣಕ್ಕೆ ತರಲಾಗುತ್ತಿದೆ.
ದಾಂಡೇಲಿಯ ಮಟ್ಟಿಗೆ ಫೆಬ್ರವರಿ 18 ಒಂದು ಐತಿಹಾಸಿಕವಾದ ದಿನವಾಗಿದ್ದು, ಇಡೀ ದೇಶವೇ ಆರಾಧಿಸುವ ಹಾಗೂ ದೇಶದ ಮಹೋನ್ನತ ಗ್ರಂಥವಾದ ಸಂವಿಧಾನವನ್ನು ದೇಶಕ್ಕೆ ನೀಡಿದ ವಿಶ್ವ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಬೇಕೆನ್ನುವ ಬಹು ವರ್ಷಗಳ ನಗರದ ಜನತೆಯ ಕನಸು ಸಾಕಾರಗೊಳ್ಳುತ್ತಿರುವ ಸುಸಮಯ ಇದೀಗ ಬಂದೊದಗಿದೆ. ನಗರ ಸಭೆಯ ಆವರಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ದಾಂಡೇಲಿ ನಗರಸಭೆಯನ್ನು ವಿದ್ಯುತ್ ದೀಪಗಳಿಂದ ಅತ್ಯಾಕರ್ಷಕವಾಗಿ ಅಲಂಕರಿಸಲಾಗಿದೆ.
ಭವ್ಯ ಮೆರವಣಿಗೆಯ ನಿಮಿತ್ತ ಹಳಿಯಾಳ ರಸ್ತೆಯಿಂದ ನಗರಸಭೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಬಂಟಿಂಗ್ಸ್ ಗಳು ರಾರಾಜಿಸುತ್ತಿದೆ. ಡಾ..ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ನೇತೃತ್ವದಲ್ಲಿ ನಗರದ ದಲಿತಪರ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ನಗರದ ಪ್ರಮುಖ ರಸ್ತೆಗಳನ್ನು ನೀಲಿ ಬಣ್ಣದ ಪತಾಕೆಗಳಿಂದ ದೇಶದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯ ಆಗಮನದ ನಿಮಿತ್ತ ಶೃಂಗರಿಸಲಾಗಿದೆ.
ದಲಿತಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಉತ್ಸಾಹದಿಂದ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.