ಹೊನ್ನಾವರ: ಜೀವನ ಎನ್ನುವುದು ಪುಸ್ತಕವಿದ್ದಂತೆ, ಇಂದು ಸಿಂಹಾವಲೋಕನ ಮಾಡಿನೋಡಿದಾಗ ಮಾಡಿರುವುದು ಅತ್ಯಲ್ಪ, ಮಾಡಬೇಕಾಗಿರುವುದು ಬಹಳಷ್ಟಿದೆ ಎಂದು ಜನ್ಮದಿನದ ಆಶೀರ್ವಚನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ನುಡಿದರು.
ಶ್ರೀಕ್ಷೇತ್ರ ಬಂಗಾರಮಕ್ಕಿಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ಜನ್ಮದಿನದ ಪ್ರಯುಕ್ತ ಮಾಘ ಶುದ್ಧ ಚತುರ್ಥಿಯಂದು ಶ್ರೀಕ್ಷೇತ್ರದ ಸಿಬ್ಬಂದಿಗಳು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶ್ರೀಕ್ಷೇತ್ರದ ಸಮಸ್ತ ಸಿಬ್ಬಂದಿಗಳು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ಸಿಬ್ಬಂದಿಗಳಾದ ಜಿ. ಟಿ. ಹೆಗಡೆ, ಮಾತನಾಡಿ ಆಧ್ಯಾತ್ಮ ಪುರುಷರಾಗಿದ್ದು ಹೇಗೆ ಆಧ್ಯಾತ್ಮಿಕ ಉನ್ನತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ ಎನ್ನುವುದನ್ನು ಗುರೂಜಿಯವರ ಕಾರ್ಯ ಸಾಧನೆಯನ್ನು ವಿವರಿಸುತ್ತಾ, ಲೋಕಕಲ್ಯಾಣಕ್ಕಾಗಿ ಹೋಮ-ಹವನಗಳು, ದೇವಾಲಯಗಳ ನಿರ್ಮಾಣ, ಅನ್ನ ದಾಸೋಹ, ಶಾಲೆಗಳ ನಿರ್ಮಾಣ, ಶಾಲೆಗಳ ದತ್ತು ಸ್ವೀಕಾರ, ಪಠ್ಯೇತರ ಚಟುವಟಿಕೆಗಳ ತರಬೇತಿ, ನಿರಾಶ್ರಿತರಿಗೆ ಆಶ್ರಯ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಅಗತ್ಯ ನೆರವು, ಉದ್ಯೋಗ, ಸ್ವ-ಉದ್ಯೋಗ ತರಬೇತಿ ಹೀಗೆ ತಾವು ಕಂಡ ಅನೇಕ ಕ್ಷಣಗಳನ್ನು ಭಾವುಕರಾಗಿ ವಿವರಿಸಿದರು. ಕ್ಷೇತ್ರದ ಸದ್ಭಕ್ತರಾದ ನಾಗೇಂದ್ರ, ಸ್ಥಳೀಯರಾದ ವಿನಾಯಕ ಮಾತನಾಡಿ, ತಾವು ನೋಡಿದಂತೆ ಗುರೂಜಿಯವರನ್ನು ಅದ್ಭುತವಾಗಿ ವಿವರಿಸಿದರು.
ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಕೊನೆಯದಾಗಿ ಮಾತನಾಡಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು, ನೀವೆಲ್ಲರೂ ಮಾತನಾಡಿದ್ದು ಕೇಳುತ್ತಾ ಅವಲೋಕಿಸಿದಾಗ ಮಾಡಿರುವುದು ಬಹಳ ಕಡಿಮೆ ಎನಿಸುತ್ತಿದೆ ಎನ್ನುತ್ತಾ ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ।।
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮಂತನುಪದೇಶ – ಮಂಕುತಿಮ್ಮ ।। ಎಂದು ಡಿ. ವಿ. ಜಿ. ಯವರ ಕಗ್ಗವನ್ನು ನೆನಪಿಸಿ ಜನ್ಮದಿನ ಎಲ್ಲರಿಗೂ ಇಲ್ಲಿಯವರೆಗೆ ಮಾಡಿದ ಸಾಧನೆಗಳನ್ನು ಸಿಂಹಾವಲೋಕನ ಮಾಡಿಕೊಳ್ಳುವ ದಿನವಾಗಬೇಕು, ದೀಪವನ್ನು ಬೆಳಗಿಸಿ ಆಚರಿಸುವಂತಾಗಬೇಕು, ಮುಂದೆ ಮಾಡಬೇಕಾಗಿರುವುದು ಬಹಳಷ್ಟಿದೆ, ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಸರ್ವರನ್ನು ಹರಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಫಲ-ಮಂತ್ರಾಕ್ಷತೆಯನ್ನು ನೀಡಿದರು.