Slide
Slide
Slide
previous arrow
next arrow

ಸರ್ವಾಧ್ಯಕ್ಷತೆಯ ಗೌರವ ಆನಂದ ತಂದಿದೆ: ಉಸ್ತಾದ್ ಕೆ.ಎಲ್.ಜಮಾದಾರ

300x250 AD

ದಾಂಡೇಲಿ : ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ದಾಂಡೇಲಿ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಉಸ್ತಾದ್ ಕೆ.ಎಲ್.ಜಮಾದಾರ್, ಈ ಗೌರವವು ಅತೀವ ಆನಂದ ತಂದಿದೆ ಎಂದಿದ್ದು, ತನ್ನ ಜೀವಮಾನದಲ್ಲಿ ದೊರೆತ ಮಹತ್ವದ ಗೌರವ ಇದಾಗಿದೆ ಎಂದು ಮಂಗಳವಾರ ನಗರದಲ್ಲಿ ಮಾಧ್ಯಮದ ಜೊತೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಅಪ್ರತಿಮ ತಬಲ ಕಲಾವಿದರಾಗಿ ನಾಡಿನೆಲ್ಲೆಡೆ ಚಿರಪರಿಚಿತರು ಕಾಶಿಂ ಸಾಬ್ ಲಾಲ್ ಸಾಹೇಬ್ ಜಮಾದಾರ. 93ರ ಇಳಿ ವಯಸ್ಸಿನಲ್ಲಿರುವ ಅವರು ಈಗಲೂ ಕೂಡ ಕಲಾ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದು ಅವರೊಳಗಿನ ಕಲಾ ಉತ್ಸಾಹಕ್ಕೆ ಹಿಡಿದ ಕೈಗನ್ನಡಿ.

ಬಡತನದಲ್ಲಿಯೂ  ತಬಲವಾದನದತ್ತ ಒಲವು ಹರಿಸಿಕೊಂಡ ಜಮಾದಾರ, ನಿರಂತರ ಪರಿಶ್ರಮದಿಂದಾಗಿ ರಾಜ್ಯ, ರಾಷ್ಟ್ರದ ವಿವಿಧಡೆ ಕಲಾ ಸೇವೆಯನ್ನು ನೀಡಿರುವ ಸಂಗೀತ ವಿದ್ವಾಂಸರಾಗಿ ಹೊರಹೊಮ್ಮಿದವರು.

1956ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ತಬಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು, 1968 ರಲ್ಲಿ ಕೊಲ್ಲಾಪುರದಲ್ಲಿ ಉಸ್ತಾದ್ ಬಾಬಾ ಸಾಹೇಬ್ ಮೀರಜ್ಕರ್ ಬಳಿ ಗುರುಕುಲ ಪದ್ದತಿಯಲ್ಲಿ ಅಭ್ಯಾಸ ಮಾಡಿ ದಿಲ್ಲಿ ಘರಾಣೆ , ಲಕ್ನೋ ಘರಾಣೆ ಹಾಗೂ ಕಥಕ್ ನೃತ್ಯದ ಪಟ್ಟುಗಳನ್ನು ಕರಗತ ಮಾಡಿಕೊಂಡು ಹೆಸರು ಮಾಡಿದವರು.

300x250 AD

ನಂತರ ಈ ತಬಲವಾದನವನ್ನೇ ತಮ್ಮ ಬದುಕಿನ ಅಂಗವನ್ನಾಗಿ ಮಾಡಿಕೊಂಡ ಇವರು ತಮ್ಮ ಮನೆಯಲ್ಲಿಯೇ ತಬಲ ತರಗತಿಯನ್ನು ನಡೆಸುವ ಜೊತೆಗೆ ದಾಂಡೇಲಿ, ಜೋಯಿಡಾ, ಕದ್ರಾ, ಕೈಗಾ, ಕೊಡಸಳ್ಳಿ, ಗಣೇಶಗುಡಿ, ಧಾರವಾಡ ಸೇರಿದಂತೆ ಹಲವಾರು ಕಡೆ ತರಬೇತಿ ಕೇಂದ್ರಗಳನ್ನು ಆರಂಭಿಸಿ, ಸಾವಿರಾರು ಶಿಷ್ಯರಿಗೆ ತಬಲಾ ತರಬೇತಿಯನ್ನು ನೀಡಿದವರು. ಸುಮಾರು 30 ವರ್ಷಗಳ ಕಾಲ ದಾಂಡೇಲಿ ಎಜುಕೇಶನ್ ಟ್ರಸ್ಟ್‌ನಲ್ಲಿ,  ಕೆಲಕಾಲ ದಾಂಡೇಲಿ ಬಿಎಡ್ ಕಾಲೇಜಿನಲ್ಲಿ ಗುರುಗಳಾಗಿಯೂ ಕಾರ್ಯನಿರ್ವಹಿಸಿರುವ ಇವರು ಈಗಲೂ ಪ್ರತಿವಾರ ಕಾರವಾರದ ಕೈಗಾಕ್ಕೆ ತೆರಳಿ ಅಲ್ಲಿನ ಆಸಕ್ತ ವಿದ್ಯಾರ್ಥಿಗಳಿಗೆ  ತಬಲಾ ತರಬೇತಿ ನೀಡುತ್ತಿರುವುದು ವಿಶೇಷ.

ರಾಜ್ಯ, ರಾಷ್ಟ್ರದೆಲ್ಲೆಡೆ  ಸಾವಿರಕ್ಕೂ  ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವ ಇವರು ತಬಲವಾದನದಲ್ಲಿ ಘಟಾನುಘಟಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ಇವರ ತಬಲವಾದನ ಕೇಳಲೆಂದೇ ಅನೇಕ ಸಂಗೀತ ವಿದ್ವಾಂಸರು ಇವರನ್ನು ಕರೆಸಿಕೊಳ್ಳುವುದುಂಟು.  ಹಲವಾರು ರಾಜ್ಯ, ರಾಷ್ಟ್ರ  ಮಟ್ಟದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಹಿರಿಮೆ ಇವರದ್ದು.  ಆಕಾಶವಾಣಿಯಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾರೆ. 1984ರಲ್ಲಿ ಇವರು 54 ಗಂಟೆಗಳ ಕಾಲ ನಿರಂತರ ತಬಲ ಸೋಲೋ ನುಡಿಸಿ ದಾಖಲೆ ಬರೆದಿದ್ದಾರೆ.

ಇವರ ಸಾಧನೆಯನ್ನು ಪರಿಗಣಿಸಿ ಇವರಿಗೆ ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಹಲವಾರು ಸನ್ಮಾನಗಳು, ಗೌರವ ಪುರಸ್ಕಾರಗಳು ಹುಡುಕಿ ಬಂದಿವೆ. ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದಿಂದ ಪಟ್ಟಣ ಶ್ರಮ ಪ್ರಶಸ್ತಿ,  2022 ರಲ್ಲಿ ಬೆಂಗಳೂರಿನಲ್ಲಿ ಅಶ್ವಾಸನ್ ಫೌಂಡೇಶನ್ ಪ್ರಶಸ್ತಿ ಹಾಗೂ ವಿಶೇಷವಾಗಿ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೂ ಭಾಜನರಾಗಿದ್ದಾರೆ. ಆ ಮೂಲಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಮೊದಲ ಹಾಗೂ ಏಕೈಕ ತಬಲಾ ವಾದಕ ಎಂಬ ಹೆಗ್ಗಳಿಕೆ ಕೂಡಾ ಇವರದ್ದಾಗಿದೆ.  93ರ ಇಳಿ ವಯಸ್ಸಿನ ಸಂಗೀತ ಕ್ಷೇತ್ರದ ಈ ದಿಗ್ಗಜನ ಸಾಧನೆಗೆ ದಾಂಡೇಲಿ ತಾಲೂಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಒಲಿದು ಬಂದಿರುವುದು ನಿಜಕ್ಕೂ ಸಕಾಲಿಕ ಮತ್ತು ಸೂಕ್ತವೂ ಆಗಿದೆ. ನಿಜವಾಗಿಯೂ ದಾಂಡೇಲಿಗೆ ದಾಂಡೇಲಿಯೆ ಅಭಿಮಾನಪಡುವ ಸಂಗತಿಯಾಗಿದೆ.

Share This
300x250 AD
300x250 AD
300x250 AD
Back to top