ದಾಂಡೇಲಿ : ಹಾರ್ನಬಿಲ್ ಹಕ್ಕಿ ಹಬ್ಬ-2024 ರ ಪ್ರಯುಕ್ತ ಅರಣ್ಯ ಇಲಾಖೆಯ ಆಶ್ರಯದಡಿ ನಗರದ ಹಾರ್ನಬಿಲ್ ಸಭಾಭವನದಲ್ಲಿ ಶುಕ್ರವಾರ ತಾಲೂಕು ಮಟ್ಟದ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನಬಿಲ್ ಹಕ್ಕಿಯ ಬಗ್ಗೆ ಅರಿವು ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ವಿವಿದೆಡೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಹಾರ್ನಬಿಲ್ ಹಕ್ಕಿಯ ಬಗ್ಗೆ ಅರಿವು ಮೂಡಿಸಲು ರಸಪ್ರಶ್ನೆ ಮತ್ತು ಕ್ಲೇ ಮಾಡಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಭಾಗವಹಿಸಿ ಮಾತನಾಡುತ್ತಾ, ಹಾರ್ನಬಿಲ್ ಹಕ್ಕಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಮತ್ತು ಅವುಗಳ ಬಗ್ಗೆ ವಿಶೇಷವಾದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಬ್ಬವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಹಾರ್ನಬಿಲ್ ಹಬ್ಬದ ನಿಮಿತ್ತ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ವಲಯರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ ಹಾರ್ನಬಿಲ್ ಹಕ್ಕಿ ವಿಶಿಷ್ಟ ಪ್ರಬೇಧದ ಹಕ್ಮಿಯಾಗಿದ್ದು, ಪಕ್ಷಿ ಸಂಕುಲಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹಾರ್ನಬಿಲ್ ಹಕ್ಕಿ ಹೊಂದಿದೆ ಎಂದು ಹೇಳಿ, ಹಾರ್ನಬಿಲ್ ಹಕ್ಕಿಯ ವಿಶೇಷತೆಗಳ ಬಗ್ಗೆ ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿಗಳಾದ ವಿನಯ್ ಭಟ್, ಬಸವರಾಜ್.ಎಂ, ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ ನಂದ್ಯಾಳ್ಕರ್, ನಗರಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರು, ದಶರಥ ಬಂಡಿವಡ್ಡರ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ್ ನಾಯಕ, ಕಾರ್ಯದರ್ಶಿ ಪ್ರವೀಣ್ ನಾಯ್ಕ, ಸಿ.ಆರ್.ಪಿ ಲಲಿತಾ ಗೌಡ, ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ, ಉಪ ವಲಯಾರಣ್ಯಾಧಿಕಾರಿಗಳಾದ ಲೋಕೇಶ್, ಸಂದೀಪ್ ನಾಯ್ಕ, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.