ಕಾರವಾರ: ಕುಷ್ಠರೋಗದ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕುಷ್ಠರೋಗ ನಿಯಂತ್ರಿಸಲು ಸಾಧ್ಯವಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾರವಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ರೆಡ್ ಕ್ರಾಸ್ ಘಟಕ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕುಷ್ಠರೋಗ ವಿರೋಧಿ ದಿನದ ಅಂಗವಾಗಿ ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಕುಷ್ಠರೋಗದ ಬಗ್ಗೆ ಕಳಂಕ ತಾರತಮ್ಯದಿಂದಾಗಿ ರೋಗಲಕ್ಷಣದ ಬಗ್ಗೆ ತಿಳಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಶಾಶ್ವತ ಅಂಗವಿಕತೆ ಉಂಟಾಗಬಹುದು ಹಾಗಾಗಿ ಜನರಲ್ಲಿ ಕುಷ್ಠರೋಗದ ಕುರಿತು ಅರಿವು ಮುಡಿಸಬೇಕು ಎಂದರು. ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಂಕರ ರಾವ್, ಮಾತನಾಡಿ ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿ ಹಿಡಿಯಿರಿ ಎಂಬ ಘೋಷವಾಕ್ಯದೊಂದಿಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವು ದೇಶಾದ್ಯಂತ ಫೆ.13 ರವರೆಗೆ ನಡೆಯಲಿದ್ದು, ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಾಣಿಸುವುದು, ಕೈಕಾಲುಗಳಲ್ಲಿ ಜೋಮು ಹಿಡಿದ ಸ್ಪರ್ಶ ಜ್ಞಾನವಿಲ್ಲದಿರುವುದು, ಮುಖ ಅಥವಾ ಕೈ ಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು, ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ, ಕೈ ಅಥವಾ ಕಾಲುಗಳ ಬೆರಳುಗಳು ಮಡಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಅಂಗೈ ಅಥವಾ ಪಾದಗಳಲ್ಲಿ ಶೀತ, ಬಿಸಿ ಸಂವೇದನೆ ನಷ್ಟವಾಗಿರುವುದು, ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಪ್ರಸ್ತುತ 96 ಕುಷ್ಠರೋಗ ಪ್ರಕರಣಗಳಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕುಷ್ಠರೋಗ ಲಕ್ಷಣಗಳು ಕಂಡುಬಂದಂತವರನ್ನು ಗುರುತಿಸಿ ಆರಂಭಿಕ ಹಂತದಲ್ಲಿ ಬಹು ಔಷಧಿ ಚಿಕಿತ್ಸೆ ಮೂಲಕ 6 ತಿಂಗಳು ಅಥವಾ 12 ತಿಂಗಳುಗಳ ಸೂಕ್ತ ಚಿಕಿತ್ಸೆ ನೀಡಿ ಮುಂದೆ ಆಗುವ ಶಾಶ್ವತ ಅಂಗವೀಕಲತೆಯನ್ನು ತಡೆಗಟ್ಟಬಹುದು ಎಂದರು.
ಚರ್ಮರೋಗ ವಿಭಾಗದ ಮುಖ್ಯಸ್ಥೆ ಹಾಗೂ ತಜ್ಞ ವೈದ್ಯೆ ಡಾ. ಶೃತಿ ಎಚ್.ಎನ್ ಉಪನ್ಯಾಸ ನೀಡಿ ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಿ, ರೋಗದಿಂದ ಭಾದಿತರಾದವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗೌರಯುತವಾಗಿ ಬದುಕಲು ಅವಕಾಶ ನೀಡಲು ಎಲ್ಲರ ಸಹಕಾರ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಚಾಲಕ ಡಾ. ನವೀನ ದೇವರಭಾವಿ, ಮನೋವೈದ್ಯ ಡಾ. ಸುವಾಸ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಶಿವಕುಮಾರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಗಾಯತ್ರಿ ಮತ್ತು ಲತಾ ಸಂಗಡಿಗರು ಪ್ರಾರ್ಥಿಸಿದರು, ಡಿಪಿಸಿ ಬಸವರಾಜ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಎಸ್ ಕನ್ನಕ್ಕನವರ ನಿರೂಪಿಸಿ ವಂದಿಸಿದರು.