ಜೊಯಿಡಾ: ಜೊಯಿಡಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೇ ತಾಲೂಕಾ ಸಮ್ಮೇಳನ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಕುಣಬಿ ಭವನದಲ್ಲಿ ನಡೆಯಿತು. ತಹಶೀಲ್ದಾರ್ ಮಂಜುನಾಥ ಮುನ್ನೊಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ಗಡಿ ಪ್ರದೇಶವಾಗಿದೆ. ಇಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿ ತಾಲೂಕಾ ಆಡಳಿತ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ತಾಪಂಕಾನಿ ಅಧಿಕಾರಿ ಆನಂದ ಬಡಕುಂದ್ರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಶೇಖ್ , ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಸಹಕಾರ ನೀಡುವ ಕುರಿತು ಮಾತನಾಡಿದರು. ಉದ್ಯಮಿ ರಮೇಶ್ ನಾಯ್ಕರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಕೇಳಿ ದಿನಾಂಕ ನಿಗದಿಪಡಿಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಕಾರ್ಯದರ್ಶಿ ಭಾಸ್ಕರ್ ಗಾಂವ್ಕರ್ ನಡೆಸಿಕೊಟ್ಟರು.