ಶಿರಸಿ: ಕನ್ನಡದ ಮೊದಲ ಸಾಮ್ರಾಜ್ಯ ಹಾಗೂ ಅರಸರಾದ ಕದಂಬರ ಆಡಳಿತ ಪ್ರಖ್ಯಾತಿಯ ಬಗ್ಗೆ ಕದಂಬೋತ್ಸವದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಫೆಬ್ರವರಿ 24 ಮತ್ತು 25 ರಂದು ವೈಭವದಿಂದ ಆಚರಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಅವರು ಮಂಗಳವಾರ ಶಿರಸಿಯ ತಾಲೂಕು ಕಚೇರಿಯಲ್ಲಿ, ಕದಂಬೋತ್ಸವ ಆಚರಣಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕದಂಬೋತ್ಸವ ಆಚರಣಿಯಲ್ಲಿ ಯಾವುದೇ ಲೋಪಗಳಾಗದಂತೆ ಅತ್ಯಂತ ವ್ಯವಸ್ಥಿತವಾಗಿ ನಡೆಸಲು 15 ಸಮಿತಿಗಳನ್ನು ರಚಿಸಿದ್ದು, ಎಲ್ಲಾ ಸಮಿತಿಗಳು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು. ಕದಂಬೋತ್ಸವದ ವೇದಿಕೆಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ, ಕಾರ್ಯಕ್ರಮ ನೀಡಲು ಇಚ್ಛಿಸುವ ಕಲಾವಿದರು ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಿದರು.
ಕ್ರೀಡಾಕೂಟ ಸಮಿತಿಯ ಮೂಲಕ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕ್ರೀಡೆಗಳನ್ನು ಆಯೋಜಿಸುವಂತೆ ಹಾಗೂ ಮಲ್ಲ ಕಂಬ ಪ್ರದರ್ಶನ, ಕುಸ್ತಿ ಪಂದ್ಯ, ಕಬಡ್ಡಿ ಮುಂತಾದ ಗ್ರಾಮೀಣ ಮತ್ತು ದೇಶೀಯ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುವಂತೆ ತಿಳಿಸಿದರು. ಕದಂಬೋತ್ಸವ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಹಾಗೂ ಕಲಾವಿದರಿಗೆ ಊಟೋಪಚಾರ ಹಾಗೂ ವಸತಿ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರಿಕೆ ವಹಿಸಿ, ವೇದಿಕೆ ಬಳಿ ಅತಿಥಿಗಳು ಗಣ್ಯರು, ಮಾಧ್ಯಮದವರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯಕ್ಕನುಗುಣವಾಗಿ ಹೆಚ್ಚಿನ ಬಸ್ ಸೌಲಭ್ಯ ಒದಗಿಸುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ವಾಹನ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು.
ಕದಂಬೋತ್ಸವ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸಲು ಹಾಗೂ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ಕದಂಬೋತ್ಸವದಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಕದಂಬೋತ್ಸವವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಶಿರಸಿ ಉಪ ವಿಭಾಗಾಧಿಕಾರಿ ಅಪರ್ಣಾ ರಮೇಶ್, ತಹಶೀಲ್ದಾರ್ ಶ್ರೀಧರ್, ಕದಂಬೋತ್ಸವ ಆಚರಣೆ ಕುರಿತು ರಚಿಸಲಾಗಿರುವ ವಿವಿಧ ಸಮಿತಿಗಳ ಅಧಿಕಾರಿಗಳು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು