ಕಾರವಾರ: ಕಳೆದ ಡಿ.16 ರಂದು ಮೊಟ್ಟೆ ಇಟ್ಟಿದ್ದ ಮೊದಲ ಗುಂಪಿನ ಕಡಲಾಮೆ ಮರಿಗಳನ್ನು ತಾಲ್ಲೂಕಿನ ದೇವಭಾಗ ಕಡಲ ತೀರದಲ್ಲಿ ಸಮುದ್ರಕ್ಕೆ ಬಿಡಲಾಯಿತು.
ಕಡಲಾಮೆ ಮರಿಗಳು ಸಾಧಾರಣವಾಗಿ 45-50 ದಿನಗಳಿಗೆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. 96 ಮೊಟ್ಟೆಗಳ ಪೈಕಿ 42 ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಬಿಡಲಾಗಿದೆ. ಸಾಮಾನ್ಯವಾಗಿ ಶೇ. 50-60 ಶೇಕಡಾ ಮೊಟ್ಟೆಗಳು ಮರಿಗಳಾಗುತ್ತವೆ. ಡಿಸೆಂಬರ್‌ನಲ್ಲಿ ಇಟ್ಟ ಮೊಟ್ಟೆಗಳ ಪೈಕಿ ಶೇ. 40 ಮರಿಗಳಾಗಿವೆ. ಆಮೆಗಳು ಮೊಟ್ಟೆ ಇಟ್ಟ ಪ್ರದೇಶದಲ್ಲೇ ಅವುಗಳನ್ನು ಸಂರಕ್ಷಿಸಲು ಪ್ರಯತ್ನಿಸಲಾಗುತ್ತವೆ. ಒಂದು ವೇಳೆ ಮೊಟ್ಟೆ ಇಟ್ಟ ಪ್ರದೇಶ ಸುರಕ್ಷಿತವಾಗಿಲ್ಲ ಎನ್ನುವುದು ಖಚಿತವಾದಲ್ಲಿ ಮೊಟ್ಟೆಗಳನ್ನು ಅರಣ್ಯ ಇಲಾಖೆಯವರು ಸ್ಥಳಾಂತರ ಮಾಡುತ್ತಾರೆ.
ಕಳೆದ ಬಾರಿ ನವೆಂಬರ್‌ನಿಂದ ಫೆಬ್ರುವರಿವರೆಗೆ 44 ಕಡೆಗಳಲ್ಲಿ ಕಡಲಾಮೆಗಳು ಮೊಟ್ಟೆಗಳನ್ನು ಇಟ್ಟಿದ್ದವು. ಈ ವರ್ಷ ಇದುವರೆಗೆ 26 ಕಡೆಗಳಲ್ಲಿ ಮೊಟ್ಟೆಗಳನ್ನ ಇರಿಸಿದ್ದು, ಫೆಬ್ರುವರಿ ತಿಂಗಳ ಕೊನೆಯವರೆಗೂ ಮೊಟ್ಟೆಗಳನ್ನ ಇಡುತ್ತವೆ. ಈ ಮೊಟ್ಟೆಗಳು ಮೇ ಕೊನೆಯ ವರೆಗೂ ಮರಿಗಳಾಗಿ ಹೊರಬರುತ್ತವೆ. ಈ ಬಾರಿ ಆಮೆ ಮೊಟ್ಟೆಗಳ ರಕ್ಷಣೆಗೆ ಕಡಲತೀರಗಳಲ್ಲಿ ಹೆಚ್ಚು ನಿಗಾ ಇರಿಸಿರುವುದರಿಂದ ಆಮೆ ಗೂಡುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.