ಶಿರಸಿ: ತಾಲೂಕಿನ ಹುಲೇಕಲ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 31ರಂದು ಒಂದು ವಿನೂತನವಾದ ಸುಗ್ಗಿ ಸಂಭ್ರಮ ಮತ್ತು ಸಾಂಪ್ರದಾಯಕ ಉಡುಗೆ – ತೊಡುಗೆಗಳ ದಿನವನ್ನು ಹಬ್ಬದ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲಕರು, ಸುಗ್ಗಿಯ ನೃತ್ಯ, ಹಾಡುಗಳಿಂದ ರಂಜಿಸಿದರು. ಶಾಲೆಯ ವೇದಿಕೆಯು ಸಂಪೂರ್ಣ ಸುಗ್ಗಿ ವಾತಾವರಣದಿಂದ ಅಲಂಕೃತಗೊಂಡಿತ್ತು. ವಿವಿಧ ಬಗೆಯ ಧಾನ್ಯಗಳ ರಾಶಿ ಪೂಜೆ, ಬಣ್ಣ ಬಣ್ಣದ ರಂಗೋಲಿ, ಎತ್ತಿನ ಬಂಡಿಯ ಮಾದರಿ, ಅಡಿಕೆ ಸಿಂಗಾರ, ಬಾಳೆ, ಕಬ್ಬು, ಮೊರ, ಬೀಸುವ ಕಲ್ಲು ಹಾಗೂ ವಿವಿಧ ಬಗೆಯ ಹೂವುಗಳಿಂದ ನಿರ್ಮಿತವಾಗಿತ್ತು. ಶಾಲೆಯ ಎಲ್ಲಾ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಅಲ್ಲದೇ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಕುಣಿದು ಕುಪ್ಪಳಿಸಿದರು. ಅಲ್ಲದೆ ವಿವಿಧ ಬಗೆಯ ಅಡುಗೆಯನ್ನು ತಯಾರಿಸಿ ಭರ್ಜರಿ ಭೋಜನವನ್ನು ಕೂಡಾ ಏರ್ಪಡಿಸಿದ್ದರು. ಒಟ್ಟಾರೆ ಶಾಲೆಯಲ್ಲಿ ಒಂದು ಹಬ್ಬದ ಸಂಭ್ರಮ ನಿರ್ಮಾಣವಾಗಿತ್ತು.
ಹುಲೇಕಲ್ ಗ್ರಾಮ ಪಂಚಾಯತ ಅಧ್ಯಕ್ಷ ಖಾಸಿಂ ಸಾಬ್ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ.ಸಿ ಅಧ್ಯಕ್ಷ ಗಜಾನನ ನಾಯ್ಕ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತಪಡಿಸಿದರು. ಹುಲೇಕಲ್ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಫೌಜಿಯಾ ಖಾಜಿ, ಸವಿತಾ ನೇತ್ರಕರ, ವಿನಯ ನಾಯ್ಕ ಉಪಸ್ಥಿತರಿದ್ದರು.
ಇಲಾಖೆ ವತಿಯಿಂದ ಆಗಮಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಬಸವರಾಜ ಪಿ. ಕಾರ್ಯಕ್ರಮದ ಕುರಿತು ‘ಇದೊಂದು ವಿನೂತನವಾದ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳು ಶಾಲೆಯಲ್ಲಿ ನಡೆಯುತ್ತಿದ್ದರೆ ಶಾಲೆ ಮತ್ತು ಸಮುದಾಯದ ಬಾಂಧವ್ಯ ಭದ್ರವಾಗಿರುತ್ತದೆ’ ಎಂದು ಹೇಳಿದರು. ಜೊತೆಗೆ ಉಪನಿರ್ದೇಶಕರ ಕಚೇರಿಯ ಎಂ. ಕೆ . ಮೊಗೇರ, ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ರವಿ ಬೆಂಚುಳ್ಳಿ, ತಾಲೂಕಾ ಸಮನ್ವಯಾಧಿಕಾರಿಗಳಾದ ದಿನೇಶ ಶೇಟ್, ಇ.ಸಿ.ಓ. ಎಂ. ಕೆ. ನಾಯ್ಕ, ಸಿ.ಆರ್.ಪಿ. ಡಿ. ಪಿ. ಹೆಗಡೆ, ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ನಾಗರತ್ನಮ್ಮ ಡಿ. ಗಣ್ಯರನ್ನು ಸ್ವಾಗತಿಸಿ ಸುಗ್ಗಿ ಸಂಭ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಂದಾ ಜಿ. ಹೆಗಡೆ ನಿರೂಪಿಸಿದರು. ಸುಜಾತಾ ಹೆಗಡೆ ವಂದಿಸಿದರು.