ಶಿರಸಿ: ತಾಲೂಕಿನ ದೇವನಳ್ಳಿಯ ವೀರಭದ್ರ ಕಲ್ಯಾಣಮಂಟಪದಲ್ಲಿ ಮುಂಡಗನಮನೆ ಸೊಸೈಟಿಯ ಸಹಯೋಗದಲ್ಲಿ ಶಿರಸಿ ಅಂಚೆ ಇಲಾಖೆಯವರು ಒಂದೇ ರೂಫಿನಲ್ಲಿ ಅಂಚೆ ಇಲಾಖೆಯ ವಿವಿಧ ರೀತಿಯ ಸೇವೆಗಳ ಬಗ್ಗೆ ಜನ ಸಂಪರ್ಕ ಸಭೆಯನ್ನು ಏರ್ಪಡಿಸಿದ್ದರು.
ಅಂಚೆ ಇಲಾಖೆಯ ಸಹಾಯಕ ಸೂಪರಿಡೆಂಟರ್ ವೆಂಕಟೇಶ್ ಬಾದಾಮಕರ್ ಮಾತನಾಡಿ, ಅಂಚೆ ಇಲಾಖೆ ಈಗ ಎಲ್ಲಾ ರೀತಿಯ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತಿದೆ ಎಂದರು. ಅಲ್ಲದೇ ಪೋಸ್ಟಿನ ಮೂಲಕ ಅತಿ ಕಡಿಮೆ ಪ್ರೀಮಿಯಂ ಮೊತ್ತದಲ್ಲಿ ಇನ್ಸುರೆನ್ಸ್ ನೀಡಲಾಗುತ್ತದೆ ಎಂದರು.
ದೇವನಳ್ಳಿ ಪಂಚಾಯತದ ಪಿ.ಡಿ.ಒ. ಕುಮಾರ ವಾಸನ್ ಮಾತನಾಡಿ ಮನೆಮನೆಗೆ ಅಂಚೆ ಇಲಾಖೆ ವಿವಿಧ ಸೇವೆಗಳನ್ನು ನೀಡುತ್ತಿರುವುದು ಶ್ಲಾಘನೀಯ, ಎನ್.ಆರ್.ಇ.ಜಿ ಸ್ಕೀಮಿನಲ್ಲಿ ಕೆಲಸ ಮಾಡುವವರಿಗೂ ಅಂಚೆ ಇಲಾಖೆ ಮೂಲಕ ಸುಲಭವಾಗಿ ಹಣ ವಿತರಿಸಲು ಸಹಾಯಕಾರಿಯಾಗುತ್ತದೆ ಎಂದರು.
ಮುಂಡಗನಮನೆ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ನಾಗಪತಿ ಭಟ್ಟ ಮಾತನಾಡಿ ನಮ್ಮ ಸಂಘ ಯಾವಾಗಲೂ ಸದಸ್ಯರ ಜೊತೆ ಇರುತ್ತದೆ. ಅಂಚೆ ಇಲಾಖೆಯ ಜನ ಸಂಪರ್ಕ ಕಾರ್ಯಕ್ರಮಕ್ಕೂ ನಾವು ಮುಂದಾಗಿದ್ದೇವೆ ಎಂದರು.
ಮುಂಡಗನಮನೆ ಸೇವಾ ಸಹಕಾರಿ ಸಂಘದ ಮಾರುಕಟ್ಟೆ ಸಲಹೆಗಾರ ವಿ.ಆರ್. ಹೆಗಡೆ ಮಾತನಾಡಿ ಅಂಚೆ ಇಲಾಖೆ ಹೆಚ್ಚಿನ ಸೇವೆಗೆ ಇತ್ತೀಚೆಗೆ ಬೆಣಗಾಂವದಲ್ಲಿ ಶಾಖೆಯನ್ನು ತೆರೆದಿದೆ. ಕಾರಣ ದೂರದ ಶಿರಸಿಗೊ, ಹೆಗಡೆಕಟ್ಟಾಕ್ಕೋ ಹೋಗಿ ಬ್ಯಾಂಕಿಂಗ್ ಸೌಲಭ್ಯ ಪಡೆಯುವುದು ಬೇಡ, ಈಗ ಸುಲಭವಾಗಿದೆ. ದೇವನಳ್ಳಿಯಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಲು, ಆಧಾರ್ ಕಾರ್ಡ ತಿದ್ದುಪಡಿ, ಸೇರ್ಪಡೆ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲು ಅರವಿಂದ ಗುಡಿಗಾರ ಹಾಗೂ ಅವರ ಅಂಚೆ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎಂದರು. ಹೆಚ್ಚಿನ ಜನರು ಅಂಚೆ ಇಲಾಖೆಯ ಸೇವೆಯನ್ನು ಇಲ್ಲಿಯೇ ಪಡೆಯಬೇಕೆಂದರು.
ವೇದಿಕೆಯಲ್ಲಿ 40 ವರ್ಷಗಳ ಕಾಲ ಅಂಚೆಯಲ್ಲಿ ದುಡಿದ ಪಿಲ್ಲು ಮರಾಠಿ ಹಾಗೂ ಸಮಾಜ ಸೇವಕ ಶಾಂತಾರಾಮ ದಿವೇಕರ ಉಪಸ್ಥಿತರಿದ್ದರು.