ಶಿರಸಿ: ಇಂದು ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಸರಿಸಾಟಿಯಿಲ್ಲದಂತೆ ಎಲ್ಲ ಮೂಲಭೂತ ವ್ಯವಸ್ಥೆಯನ್ನು ಹೊಂದುತ್ತಿವೆ. ಸರಕಾರಿ ಶಾಲೆಗಳು ಇಂದು ಕೇವಲ ಕನ್ನಡ ಶಾಲೆಗಳಾಗಿ ಉಳಿದಿಲ್ಲ ನಮ್ಮಲ್ಲೂ ಆಂಗ್ಲ ಮಾಧ್ಯಮ ಆರಂಭಗೊಂಡಿದೆ. ಅದಕ್ಕೆ ಕಾರಣ ಅನೇಕ ಸ್ವಯಂಸೇವಾ ಸಂಸ್ಥೆಗಳು. ಸರಕಾರಿ ಶಾಲೆಗಳು ಶಿಕ್ಷಣ ಉನ್ನತೀಕರಣ ಮಾಡುತ್ತಿದೆ.ದಾನಗಳನ್ನು ನೀಡುವಾಗ ಯೋಗ್ಯರಿಗೆ, ಸತ್ಪಾತ್ರರಿಗೆ ನೀಡುವುದು ನಮ್ಮ ಭಾರತೀಯ ಸಂಸ್ಕೃತಿಯ ಸಂಪ್ರದಾಯ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ದಿಗೆ ಕಾರಣವಾಗುತ್ತಿರುವದು ಸತ್ಪಾತ್ರರಿಗೆ ದಾನ ನೀಡುತ್ತಿರುವ ಸಂಸ್ಥೆ ಯೂಥ್ ಫಾರ್ ಸೇವಾ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಡಿಡಿಪಿಐ ಪಿ. ಬಸವರಾಜ ಹೇಳಿದರು.
ಅವರು ಯೂಥ್ ಫಾರ್ ಸೇವಾ ಆಯೋಜಿಸಿದ್ದ ‘ಚಿಗುರು -2024’ ಚಿಣ್ಣರ ಮೇಳ ಉದ್ಘಾಟಿಸಿ ಮಾತನಾಡುತ್ತಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದಗೊಳಿಸಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರಯುವಂತೆ ಮಾಡುತ್ತಿರುವ ಏಕೈಕ ಸ್ವಯಂ ಸೇವಾ ಸಂಸ್ಥೆ ಯೂಥ್ ಫಾರ್ ಸೇವಾ ಎಂದು ಅವರು ತಿಳಿಸಿದರು.
ವಿದ್ಯಾ ಚೇತನ ಸ್ಕಾಲರ್ಶಿಪ್ ಕೊಡುವುದರ ಮೂಲಕ ಸರ್ಕಾರಿ ಶಾಲಾ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುತ್ತಿದೆ. ಎನ್. ಎಮ್.ಎಮ್.ಎಸ್ ಪರೀಕ್ಷೆ ನಡೆಸುವಲ್ಲಿ ಸರ್ವ ಪ್ರಯತ್ನ ಹಾಕಿ ತನ್ನ ಸ್ವಯಂಸೇವಕರ ಮುಖಾಂತರ ಮಕ್ಕಳಿಗೆ ಪಾಠ ಮಾಡುತ್ತಿದೆ. ಸರ್ಕಾರಿ ಶಾಲೆಗಳ ಪಾಠೋಪಕರಣ , ಪೀಠೋಪಕರಣ ಇವುಗಳನ್ನು ಒದಗಿಸಿ ಶೈಕ್ಷಣಿಕ ಅಭಿವೃದ್ದಿಗೆ ಯೂಥ್ ಫಾರ್ ಸೇವಾ ಉತ್ತಮ ಕೊಡುಗೆ ನೀಡುತ್ತಿದೆ ಮತ್ತು ಹೆಸರಿಗೆ ತಕ್ಕಂತೆ ಸೇವಾ ಕಾರ್ಯನಿರತ ಯುವಕರ ತಂಡ ಕಟ್ಟಿಕೊಂಡ ಸಂಸ್ಥೆ ಎಂದು ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಹೇಳಿದರು.
ಯೂಥ್ ಫಾರ್ ಸೇವಾ ಸಮಾಜ ಸೇವೆ ನಿರತರ ಸ್ವಯಂ ಸೇವಕರ ಆಂದೋಲನ ನಡೆಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಕೂಲ್ ಬ್ಯಾಗ್ ವಿತರಣೆ, ವಿದ್ಯಾ ಚೇತನ ಹೆಸರಿನಲ್ಲಿ ವಿದ್ಯಾರ್ಥಿ ವೇತನ, ಮಕ್ಕಳ ಸುಪ್ತ ಪ್ರತಿಭೆ ಅರಳಿಸುವ ಕಾರ್ಯಕ್ರಮ ಚಿಗುರು ನಡೆಸಿಕೊಂಡು ಬರುತ್ತಿದೆ. ಚಿಗುರು ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಳ್ಳುವದು ಮುಖ್ಯ ಇದರಿಂದ ಮಕ್ಕಳಲ್ಲಿ ಧೈರ್ಯ ತುಂಬುತ್ತದೆ ಎಂದು ಯೂಥ್ ಫಾರ್ ಸೇವಾದ ನ್ಯಾ಼ಷನಲ್ ಹೆಡ್ ಕಾರ್ಪೋರೇಟ್ ರಿಲೇಶನ್ಸ್ ಭಾಸ್ಕರ ಕೇಶವ ಮೂರ್ತಿ ತಿಳಿಸಿದರು.
ಕೇವಲ ಪಠ್ಯ ಪುಸ್ತಕಗಳಿಂದ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಅಸಾಧ್ಯ. ಮಕ್ಕಳು ಯಶಸ್ಸು ಗಳಿಸುವದಷ್ಟೇ ಅಲ್ಲ ವೈಫಲ್ಯಗಳನ್ನು ಎದುರಿಸುವ ಶಕ್ತಿ ಗಳಿಸಬೇಕು. ಮೌಲ್ಯಯುತ ಶಿಕ್ಷಣ ದೊರೆಯಬೇಕು ಅದಕ್ಕಾಗಿ ಈ ಚಿಗುರು ನಡೆಯುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ.ಎನ್. ಹೊಸ್ಮನಿ ಹೇಳಿದರು.
ಯೂಥ್ ಫಾರ್ ಸೇವಾ ಸಂಚಾಲನಾ ಸಮಿತಿಯ ಸದಸ್ಯ ಶ್ರೀಧರ ಇಸಳೂರು ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್.ಬಿ ಕಾಲನಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಜಿ.ಎಚ್.ನಾಯ್ಕ, ಶ್ರೀನಿಕೇತನ ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕ ಪ್ರಶಾಂತ ಭಟ್ಟ್, ಯೂಥ್ ಫಾರ್ ಸೇವಾ ಕರ್ನಾಟಕ ಕಾರ್ಪೋರೆಟ್ ಪ್ರೊಜೆಕ್ಟ್ ಹೆಡ್ ರವಿ ಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿರಸಿ, ಸಿದ್ದಾಪುರ, ಮುಂಡಗೋಡು ತಾಲೂಕಿನ 35 ಶಾಲೆಗಳಿಂದ 800 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಸಪ್ರಶ್ನೆ, ಮಣ್ಣಿನ ಮಾದರಿ, ಜನಪದ ನೃತ್ಯ, ಕಿರುನಾಟಕ, ರಂಗೋಲಿ,ಗೋಣಿ ಚೀಲ ಓಟ ಮೊದಲಾದ 18 ಸ್ಪರ್ಧೆ ಏಕಕಾಲಕ್ಕೆ ನಡೆಯಿತು. 100 ಶಿಕ್ಷಕರು, 100 ಜನ ಪಾಲಕರು ಭಾಗವಹಿಸಿದ್ದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಅರಣ್ಯ ಮಹಾವಿದ್ಯಾಲಯ, ತೊಟಗಾರಿಕಾ ಮಹಾವಿದ್ಯಾಲಯ, ಟಿ.ಎಸ್.ಎಸ್ ಪ್ಯಾರಾ ಮೆಡಿಕಲ್ ಕಾಲೇಜ್, ಎಂ.ಇ.ಎಸ್. ನರ್ಸಿಂಗ್ ಕಾಲೇಜಿನ 200 ಸ್ವಯಂ ಸೇವಕರ ಸಹಕಾರದಲ್ಲಿ ಚಿಗುರು ಚಿಣ್ಣರ ಮೇಳ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಯೂಥ್ ಫಾರ್ ಸೇವಾ ಸಂಚಾಲನಾ ಸಮಿತಿಯ ಸದಸ್ಯ ಡಾ. ಕೋಮಲಾ ಭಟ್ಟ್, ಮುಖ್ಯ ಅತಿಥಿಗಳಾಗಿ ಬಹುಮಾನ ಪ್ರಯೋಜಕ ಆಯನೂರು ಸರ್ಕಾರಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಗೌರಿಶ ಭಾಡ್ಕರ್ ಪಾಲ್ಗೊಂಡಿದ್ದರು. ಸ್ಪರ್ಧೆಗಳ ಬಹುಮಾನ ಪ್ರಾಯೋಜಕರಾಗಿ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ ಮತ್ತು ನಿರಂತರ ಶಿಕ್ಷಕ/ಕಿಯರ ಸಹಾಯವಾಣಿ ವಿಶ್ವನಾಥ ಗೌಡ, ಆಯನೂರು ಸರ್ಕಾರಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಗೌರೀಶ ಭಾಡ್ಕರ್ ಪಾಲ್ಗೊಂಡಿದ್ದರು. ಪರಿಸರ ಸಂಯೋಜಕ ಉಮಾಪತಿ ಭಟ್ಟ್ ಪ್ರಸ್ತಾವಿಸಿದರು. ಕವಿತಾ ನಾಯ್ಕ ನಿರೂಪಿಸಿದರು. ಶಿಕ್ಷಣ ಸಂಯೋಜಕ ನಂದೀಶ್ ವಿ. ಸ್ವಾಗತಿಸಿ ಪರಿಚಯಿಸಿದರು. ಹರ್ಷ ವಂದಿಸಿದರು.