ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ತಹಶೀಲ್ದಾರ್ ಶೈಲೇಶ್ ಪರಮಾನಂದ ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪ ಗೌರವವನ್ನು ಸಲ್ಲಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು – ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಪರಿಣಾಮವಾಗಿ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಈ ನಿಟ್ಟಿನಲ್ಲಿ ಮಡಿವಾಳ ಮಾಚಿದೇವರು ಅಸಮಾನತೆಯನ್ನು ಹೋಗಲಾಡಿಸಲು ಕ್ಷಿಪ್ರ ಕ್ರಾಂತಿಯನ್ನು ಮಾಡಿದ್ದರು. ಸರ್ವರಿಗೂ ಸಮಪಾಲು – ಸಮಬಾಳು ಒದಗಿಸಲು ಬಸವ – ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುತ್ತಾರೆ. ಮಡಿವಾಳ ಮಾಚಿದೇವರ ತತ್ವದರ್ಶಗಳನ್ನು ಅನುಸರಿಸಿ ನಡೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್ ಆಹಾರ ನಿರೀಕ್ಷಕರಾದ ಗೋಪಿ ಚೌಹ್ವಾಣ್, ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳಾದ ಮುಕುಂದ್ ಬಸವಮೂರ್ತಿ, ದೀಪಾಲಿ ಪೆಡ್ನೇಕರ್, ಭರತ್, ಗಜು ಮೊದಲಾದವರು ಉಪಸ್ಥಿತರಿದ್ದರು.