ಹೊನ್ನಾವರ: ಹೊನ್ನಾವರ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ ನೌಕರಿಯನ್ನು ಪಡೆಯಲು ಉಪಯುಕ್ತವಾಗುವ ತರಗತಿಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿರುವುದು ಎಲ್ಲಿಯೂ ಇಲ್ಲವಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿ.ಎ. ಫೌಂಡೇಶನ್ ತರಗತಿಯನ್ನು ಮಾಡಬೇಕೆಂಬ ಇಚ್ಛೆಯನ್ನು ಹೊಂದಿರುವವರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲು ಎಂ.ಪಿ.ಇ ಸೊಸೈಟಿ ಹಾಗೂ ಡಾ.ಭಂಡಾರಿ & ಅಸೋಸಿಯೇಟ್ಸ್ ಅವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸಿ.ಎ. ಫೌಂಡೆಶನ್ ತರಗತಿಯನ್ನು ನಡೆಸುವ ಸಲುವಾಗಿ ಎಸ್.ಡಿ.ಎಂ.ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.
ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವವರು ಇಲ್ಲವಾಗಿದೆ. ಇದೇ ಉದ್ದೇಶವನ್ನು ಇಟ್ಟುಕೊಂಡು ಎಂ.ಪಿ.ಇ.ಸೊಸೈಟಿ ಹಾಗೂ ಡಾ. ಭಂಡಾರಿ & ಅಸೋಸಿಯೇಟ್ಸ್ ಅವರು ಸೇರಿ ತಾಲೂಕಿನ ವಿದ್ಯಾರ್ಥಿಗಳಿಗೆ ಸಿ.ಎ.ಫೌಂಡೇಶನ್ ಬಗ್ಗೆ ಮಾರ್ಗದರ್ಶನವನ್ನು ನೀಡಲು ಒಂದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಕಾಲೇಜು ಎನ್ನುವ ಹೆಗ್ಗಳಿಕೆ ಎಂ.ಪಿ.ಇ.ಸೊಸೈಟಿಯದ್ದಾಗಿದೆ.
ಎಂ.ಪಿ.ಇ.ಸೊಸೈಟಿಯ ಡಾ. ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರ ಅಡಿಯಲ್ಲಿ ಸಿ.ಎ.ಫೌಂಡೇಶನ್ ಕೋಚಿಂಗ್ ತರಗತಿಯನ್ನು ನಡೆಸಲಿದ್ದೇವೆ. ಉಪನ್ಯಾಸಕರಾದ ಡಾ.ವಿ.ಎಂ.ಭಂಡಾರಿ, ರಾಘವೇಂದ್ರ ಭಟ್, ರಾಜೀವಿ ನಾಯಕ್, ಜಿ.ಎಸ್.ಭಟ್, ವಿ.ಎನ್.ಹೆಗಡೆ, ಅಜೇಯ್ ಭಟ್, ಸಂದೀಪ್ ಪ್ರಭು, ಇವರನ್ನು ಒಳಗೊಂಡ ತಂಡ ಸಿ.ಎ.ಫೌಂಡೇಶನ್ ತರಗತಿ ಮುಂದುವರೆಯುತ್ತದೆ. ಈಗಾಗಲೇ ೧೭ ವಿದ್ಯಾರ್ಥಿಗಳು ಈ ತರಗತಿಗೆ ನೋಂದಾವಣೆಯನ್ನು ಮಾಡಿರುತ್ತಾರೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿ.ಎ ಫೌಂಡೇಶನ್ ತರಗತಿಯನ್ನು ಪಡೆದುಕೊಳ್ಳಲು ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು. ತಾಲೂಕಿನ ಹಾಗೂ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಈ ತರಗತಿಯ ಸಂಪೂರ್ಣ ಲಾಭವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ ಎಂದು ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ,ಶಿವಾನಿ ಹೇಳಿದರು. ಇನ್ನು ಡಾ.ಭಂಡಾರಿ & ಅಸೋಸಿಯೇಟ್ಸ್ ವತಿಯಿಂದ ಡಾ.ವಿ.ಎಂ.ಭಂಡಾರಿ ಮಾತನಾಡಿ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಸಿ.ಎ. ಫೌಂಡೇಶನ್ ಕಲಿಯಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾಗಿತ್ತು. ಆದರೆ ಈಗ ನಮ್ಮಲ್ಲಿಯೇ ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಇದೇ ಬರುವ ಏಪ್ರೀಲ್ ನಿಂದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸಿ.ಎ. ಫೌಂಡೇಶನ್ ನ ಪ್ರತ್ಯೇಕ ಬ್ಯಾಚ್ ಮಾಡಿ ತರಗತಿಯನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ಇದೇ ವೇಳೆ ಎಂ.ಪಿ. ಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್, ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ , ಖಜಾಂಚಿ ಉಮೇಶ್ ನಾಯ್ಕ, ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರ ಡೈರೆಕ್ಟರ್ ಶಿವರಾಮ್ ಶಾಸ್ತ್ರಿ, ಕೋ-ಆರ್ಡಿನೇಟರ್ ಪ್ರಸಾದ್ ಹೆಗಡೆ ಉಪಸ್ಥಿತರಿದ್ದರು.