ಶಿರಸಿ: ಮನೆಯೊಂದರಲ್ಲಿ ಒತ್ತಾಯಪೂರ್ವಕವಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಆರು ಜನರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಹಾವೇರಿ ಜಿಲ್ಲೆಯ ಪರಮೇಶ್ವರ ನಾಯ್ಕ, ಸುನಿತಾ ನಾಯ್ಕ, ಧನಂಜಯ ಶಿವಣ್ಣ, ಶಾಲಿನಿ ರಾಣಿ, ಮುಂಡಗೋಡ ಕ್ಯಾದಗಿಕೊಪ್ಪದ ಕುಮಾರ ಲಮಾಣಿ ಮತ್ತು ತಾರಾ ಲಮಾಣಿ ಬಂಧಿತರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾ ಸಮೀಪದ ಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗಳೆಮನೆಯಲ್ಲಿ ಆರು ಜನರ ತಂಡ ಆದರ್ಶ ನಾಯ್ಕ ಎಂಬುವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಕ್ರೈಸ್ತ ಸಮುದಾಯಕ್ಕೆ ಸೇರಲು ಒತ್ತಾಯಿಸಿದ್ದಾರೆ. ಮತಾಂತರದ ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಆರೋಗ್ಯ ಸ್ಥಿತಿ ಸುಧಾರಿಸಿದೆ. ಹಿಂದೂ ದೇವರ ಪೋಟೊಗಳ ಬದಲಿಸಿ, ಹಿಂದೂ ಧರ್ಮ ಬಿಟ್ಟು ಯೇಸುಗೆ ಪೂಜಿಸಿ ಎಂದು ಹೇಳಿದ್ದಾರೆ. ಆರೋಪಿಗಳು ಹಿಂದೂ ದೇವರಿಗೆ ಅವಮಾನಿಸಿದ್ದು ಅಲ್ಲದೇ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿರುವುದಾಗಿ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆವು’ ಎಂದು ಪಿಎಸ್‌ಐ ಪ್ರತಾಪ್ ಪಚ್ಚಪ್ಪಗೋಳ ತಿಳಿಸಿದ್ದಾರೆ. ಈ ವೇಳೆ ಹಿಂದೂ ಜಾಗರಣ ವೇದಿಕೆ ಶಿರಸಿ ಜಿಲ್ಲಾ ಸಂಚಾಲಕ ಹರೀಶ ಕರ್ಕಿ, ಹಿಂದೂಪರ ಸಂಘಟನೆಗಳ ಪ್ರಮುಖರಾದ ವಿಠ್ಠಲ್ ಪೈ, ಸತೀಶ, ಪ್ರಸನ್ನ ಹೆಗಡೆಕಟ್ಟಾ, ಪಿ.ವಿ.ಹೆಗಡೆ, ದತ್ತು ಜಿಗಳೆಮನೆ ಸೇರಿದಂತೆ ಇನ್ನಿತರರು ಆರೋಪಿತರಿಗೆ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಯನ್ನು ಆಗ್ರಹಿಸಿದರು.