ಸಿದ್ದಾಪುರ; ಇತ್ತೀಚೆಗೆ ಯುರೋಪಿನಲ್ಲಿ ಜಾರ್ಜಿಯಾ, ಸೈಪ್ರಸ್ ಮತ್ತು ಮೊರಾಕ್ಕೋ ರಾಷ್ಟ್ರಗಳು ಜಂಟಿಯಾಗಿ ನಡೆಸಿದ ಅಂತರಾಷ್ಟ್ರೀಯ ಕಲಾತ್ಮಕ ಛಾಯಾಗ್ರಹಣ ಒಕ್ಕೂಟ (ಎಫ್.ಐ.ಎ.ಪಿ) ಹಾಗೂ ಫೊಟೊಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾ (ಪಿ.ಎಸ್.ಎ) ದಿಂದ ಮಾನ್ಯತೆ ಹೊಂದಿದ “ಫೋಟೋ ಟ್ರಿಗರ್” ಅಂತಾರಾಷ್ಟ್ರೀಯ ಕಲಾತ್ಮಕ ಛಾಯಾಚಿತ್ರ ಪ್ರದರ್ಶನದಲ್ಲಿ ತಾಲೂಕಿನ ಖ್ಯಾತ ಛಾಯಾಚಿತ್ರಗ್ರಾಹಕ ನಾಗೇಂದ್ರ ಮುತ್ಮುರ್ಡು ಅವರಿಗೆ ಸಮಗ್ರ ಅತ್ಯುತ್ತಮ ಸ್ಪರ್ಧಿಗೆ ನೀಡುವ “ಎಫ್ಐಎಪಿಬ್ಲ್ಯೂ ಬ್ಯಾಡ್ಜ ಫಾರ್ ಇಂಟರ್‌ನ್ಯಾಶನಲ್ ಬೆಸ್ಟ ಎಂಟ್ರಂಟ್” ಪ್ರಶಸ್ತಿ ಲಭಿಸಿದೆ.
ಪ್ರಪಂಚದ 40 ದೇಶಗಳ 288 ಛಾಯಾಚಿತ್ರ ಗ್ರಾಹಕರು ಭಾಗವಹಿಸಿದ್ದ ಈ ಪ್ರದರ್ಶನದಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟಾರೆ ವಯಕ್ತಿಕವಾಗಿ ಗಳಿಸಿದ ಗರಿಷ್ಠ ಅಂಕಗಳು ಹಾಗೂ ಪದಕಗಳ ಆಧಾರದ ಮೇಲೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನಾಗೇಂದ್ರ ಮುತ್ಮುರ್ಡು ಅವರಿಗೆ ನೀಡಲಾಗುತ್ತಿದೆ. ವಿಶೇಷವೆಂದರೆ ನಾಲ್ಕು ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳೊಂದಿಗೆ ನಾಗೇಂದ್ರ ಅವರ ಹದಿನೆಂಟು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಪ್ರತ್ಯೇಕ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ ಇವರ “ಕೀಟಗಳ ಮಿಲನೋತ್ಸವ”(ಬಗ್ಸ ಮೇಟಿಂಗ್) ಚಿತ್ರಕ್ಕೆ ಅಮೇರಿಕಾದ ಪಿ.ಎಸ್.ಎ. ಚಿನ್ನದ ಪದಕ ಲಭಿಸಿರುತ್ತದೆ. ಮಾರ್ಚ ತಿಂಗಳಲ್ಲಿ ಜಾರ್ಜಿಯಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ನಾಗೇಂದ್ರ ಮುತ್ಮುರ್ಡು ಅವರ ಪ್ರಶಸ್ತಿ ವಿಜೇತ ಹಾಗೂ ಆಯ್ಕೆಯಾದ ಉತ್ತಮ ಚಿತ್ರಗಳ ಪ್ರದರ್ಶನವೂ ನಡೆಯಲಿದೆ.