Slide
Slide
Slide
previous arrow
next arrow

ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ‘ಪತ್ರಕರ್ತ’ ನಿಲ್ಲುತ್ತಾನೆ: ಸಚಿವ ಹೆಬ್ಬಾರ್

300x250 AD

ಶಿರಸಿ: ಸಮಾಜದ ಮೂರೂ ಅಂಗಗಳನ್ನು ತಿದ್ದಬೇಕಾದುದು ಪತ್ರಿಕಾ ರಂಗ. ಇಂದು ಒಬ್ಬ ರಾಜಕಾರಣಿ ರಾಜಕಾರಣ, ಅಧಿಕಾರದ ಬಗ್ಗೆ ಚಿಂತಿಸಿದರೆ ಬುದ್ಧಿಜೀವಿ ಸಮಾಜದ ಒಳಿತನ್ನು ಚಿಂತನೆ ಮಾಡುತ್ತಾನೆ. ಪತ್ರಕರ್ತ ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ನಿಲ್ಲುತ್ತಾನೆ ಎಂದು ಶಾಸಕ, ಮಾಜಿ ಸಚಿವ ಶಿವರಾಮ ಹೆಬ್ಬಾರ್ ಬಣ್ಣಿಸಿದರು.

ಜಿಲ್ಲಾ ಪತ್ರಿಕಾ‌ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಕೆ.ಶಾಮರಾವ್, ಅಜ್ಜಿಬಳ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ದುಬಾರಿಯಾದ ಪತ್ರಿಕೆ ಹಾಳೆ, ಸಾಗಾಟ, ಮನೆ ಹಂಚುವ ಹುಡುಗನ ತನಕ ನೋಡಬೇಕಾಗಿದೆ. ನಾನು ಒಂದು ಪತ್ರಿಕೆ ನಡೆಸಿದ್ದೆ. ಆದರೆ ಅದರ ಕಷ್ಟ ನೋಡಿದೆ‌. ಕಡೆಗೆ ಕೈ ಬಿಟ್ಟೆ. ಯಾರಿಗೂ ಮುದ್ರಣ ಮಾಧ್ಯಮ ಕಷ್ಟ ಬೇಡ ಎಂಬಂತಿದೆ. ಅದರ ನಡುವೆ ಪತ್ರಿಕೆ ನಡೆಸುವದು ಸುಲಭವಲ್ಲ. ಹಲವರು ನಡೆಸುತ್ತಿದ್ದಾರೆ ಎಂದರು. ಇಂದಿನ ರಾಜಕಾರಣದಲ್ಲಿ ಎಲ್ಲರೂ ಅಧಿಕಾರಕ್ಕೆ ಬರಬೇಕು ಎಂಬಂತಾಗಿದೆ‌ ಇವತ್ತಿನ ರಾಜಕೀಯ ಸಿದ್ದಾಂತ . ಪ್ರತಿ ರಾಜಕಾರಣಿ ಮುಂದೆ ನಡೆಯುವ ಚುನಾವಣೆ ಲಕ್ಷ್ಯ ಹಾಕುತ್ತಾನೆ. ಹಾಗಂತ ನಾನೂ ಏನೂ ತಪ್ಪು ಮಾಡಿಲ್ಲ‌ ಅಂತಲ್ಲ. ವ್ಯವಸ್ಥೆ ಹೊರತಾಗಿ ಬದುಕಲು ನನಗೂ ಅಧಿಕಾರ ಇಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದರು.

ಪತ್ರಕರ್ತ ನಾಗರಾಜ ಇಳೆಗುಂಡಿ ಮಾತನಾಡಿ, ಸವಾಲು ಎಲ್ಲ ರಂಗಕ್ಕೆ ಇದ್ದಂತೆ ಪತ್ರಿಕಾ ರಂಗದಲ್ಲಿಯೂ ಇದೆ. ಪತ್ರಿಕಾ ರಂಗಕ್ಕೆ ಸವಾಲುಗಳನ್ನು ಎದುರಿಸಿ ಮೇಲೇಳುವ ಸಾಮರ್ಥ್ಯವಿದೆ ಎಂದರು. ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಮಾತನಾಡಿ, ಪತ್ರಕರ್ತ ಪ್ರತಿದಿನ ನೂರಾರು ಜನರನ್ನು ನೋಡುತ್ತಾನೆ. ಸಮಾಜದ ಅಂಕು ಡೊಂಕುಗಳನ್ನೂ ಗುರುತಿಸಿ ತಿಳಿಸುತ್ತಾನೆ. ನಮ್ಮ ಜಿಲ್ಲೆಯಲ್ಲಿ ಸೂಕ್ತ ಉದ್ಯೋಗಾವಕಾಶ ಇರದಿರುವುದರಿಂದ ಪ್ರತಿಭಾ ಪಲಾಯನ ಆಗುತ್ತಿದೆ. ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪನೆಯ ಅಗತ್ಯವಿದೆ. ಈ ಮೂಲಕ ಯುವ ಜನತೆ ಜಿಲ್ಲೆಯಲ್ಲಿಯೇ ಉಳಿದುಕೊಳ್ಳುವಂತಾಗಬೇಕು ಎಂದರು.

300x250 AD

ಇದೇ ವೇಳೆ ಜಿ.ಎಸ್. ಹೆಗಡೆ ಅಜ್ಜಿಬಳ್ ಪ್ರಶಸ್ತಿಯನ್ನು ಪತ್ರಕರ್ತರಾದ ಶಾಂತೇಶಕುಮಾರ ಬೆನಕನಕೊಪ್ಪ, ಎಂ. ಜಿ. ನಾಯ್ಕ ಕುಮಟಾ, ಪ್ರಭಾವತಿ ಜಯರಾಜ್ ಯಲ್ಲಾಪುರ, ಸಂದೇಶ ದೇಸಾಯಿ ಜೊಯಿಡಾ, ರಾಘವೇಂದ್ರ ಹೆಬ್ಬಾರ್ ಭಟ್ಕಳ ಅವರಿಗೆ ಪ್ರದಾನ ಮಾಡಲಾಯಿತು. ಶಾಸಕ ಭೀಮಣ್ಣ ನಾಯ್ಕ, ಸಂಘದ ಜಿಲ್ಲಾಧ್ಯಕ್ಷ ಜಿ. ಸು. ಭಟ್ ಬಕ್ಕಳ, ಪತ್ರಕರ್ತರಾದ ಜಿ.ಯು.ಭಟ್ ಹೊನ್ನಾವರ, ಬಸವರಾಜ ಪಾಟೀಲ, ಪ್ರದೀಪ ಶೆಟ್ಟಿ, ಸುಮಂಗಲಾ ಹೊನ್ನೆಕೊಪ್ಪ ಇತರರಿದ್ದರು. ವಿಠ್ಠಲದಾಸ ಕಾಮತ್ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top