ಶಿರಸಿ: ಎಲ್ಲರ ಕಷ್ಟಕ್ಕೂ ಸ್ಪಂದಿಸುವ ಪತ್ರಕರ್ತರ ಸಂಕಷ್ಟಕ್ಕೂ ಸ್ಪಂದಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲರಿಗೂ ಸ್ಪಂದಿಸುವ ಪತ್ರಕರ್ತರು ನಮ್ಮಲ್ಲಿ ಸಾಕಷ್ಟು ಇದ್ದಾರೆ. ಅಲ್ಲೋ ಇಲ್ಲೋ ಒಂದಿಬ್ಬರು ಅಪವಾದಕ್ಕೆ ಇರಬಹುದು. ಒಂದಿಬ್ಬರು ನಮ್ಮಲ್ಲೂ ತಪ್ಪು ಮಾಡಿದರೆ ರಾಜಕಾರಣಕ್ಕೂ ಆರೋಪಿಸುತ್ತವೆ. ನಮ್ಮ ಜಿಲ್ಲೆಯ ಪತ್ರಕರ್ತರು ಪ್ರಾಮಾಣಿಕವಾಗಿ ಜಿಲ್ಲೆಯ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿದ್ದಾರೆ ಎಂದರು. ಉತ್ತರ ಕನ್ನಡದ ಪ್ರಗತಿಗೆ ರಾಜಕಾರಣಿಗಳಿಂತ ಅಧಿಕ ಕೊಡುಗೆ ಪತ್ರಕರ್ತರು ನೀಡಿದ್ದಾರೆ. ಇಲ್ಲಿಯ ಪತ್ರಕರ್ತರಿಗೆ ಸರಕಾರದಿಂದ ಬೇರೆ ಕಡೆ ಸಿಕ್ಕ ಸೌಲಭ್ಯ ನಮ್ಮ ಜಿಲ್ಲೆಯವರಿಗೆ ಸಿಗಲಿಲ್ಲ ಎಂದರೆ ಮಾಧ್ಯಮ ಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುವೆ ಎಂದರು.
ಆಸ್ಪತ್ರೆಗೆ ಬದ್ಧ: ಜಿಲ್ಲೆಯ ಬಹು ಬೇಡಿಕೆಯಾದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲು ಬದ್ದ. ಈ ಮಾತನ್ನು ಇಲ್ಲೂ ಪುನುರುಚ್ಚರಿಸುತ್ತೇನೆ ಎಂದರು.
ಸರಕಾರದಿಂದ ಆಸ್ಪತ್ರೆ ಆದರೆ ಅದು ಬಡವರಿಗೆ, ಜನ ಸಾಮಾನ್ಯರಿಗೆ ನಿರಂತರ ಬಳಕೆಗೆ ಸಿಗಬೇಕು. ಅಂಥ ಆಸ್ಪತ್ರೆ ನಿರ್ಮಾಣ ಮಾಡುವದು ನಮ್ಮ ಕನಸು ಎಂದರು. ಮಣಿಪಾಲ ಆಸ್ಪತ್ರೆ, ನಿಟ್ಟೆ ಆಸ್ಪತ್ರೆ ಅವರು ಅಥವಾ ಯಾರಾದರೂ ಮುಂದೆ ಬಂದರೆ ಜಿಲ್ಲಾಡಳಿತ ಸಮಸ್ತ ಮೂಲಭೂತ ಸೌಲಭ್ಯ ಒದಗಿಸಲಿದ್ದೇವೆ ಎಂದರು. ಈ ಬಗ್ಗೆ ಈಗಾಗಲೇ ಅನೇಕ ಪ್ರಮುಖ ಆಸ್ಪತ್ರೆಗಳ ಜೊತೆ ಸಂಪರ್ಕದಲ್ಲಿ ಇದ್ದೇವೆ. ಜನರು ಸಲಹೆ ಕೂಡ ಕೊಡಬಹುದು ಎಂದರು.
ತಪ್ಪಾದರೂ ಬರೀರಿ: ಪತ್ರಕರ್ತರು ಯಾರೇ ಕಷ್ಟದಲ್ಲಿದ್ದರೂ ನಾನು ಸಹಾಯ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ನನ್ನನ್ನು ಗುರುತಿಸಿದ್ದರೆ ಪತ್ರಕರ್ತರೇ ಕಾರಣ. ನಮ್ಮದೂ ತಪ್ಪಾದರೆ ಬರೆಯಿರಿ. ಅನಗತ್ಯ ಬರೆಯುವ ಬದಲು ಸಮಸ್ಯೆಗಳ ಗಮನ ಸೆಳೆಯಿರಿ ಎಂದೂ ಹೇಳಿದ ಅವರು, ಜಿಲ್ಲಾ ಸಂಘದ ಪತ್ರಕರ್ತರ ಕ್ಷೇಮ ನಿಧಿಗೂ ಕೈ ಜೋಡಿಸುವದಾಗಿ ಹೇಳಿದರು.
ಜಿಲ್ಲೆಯ ಹಿರಿಯ ಪತ್ರಕರ್ತ, ಉದಯವಾಣಿ ಹಿರಿಯ ವರದಿಗಾರ ಜಿ.ಯು ಭಟ್ಟ ಹೊನ್ನಾವರ, ರಾಜ್ಯದ ಪತ್ರಿಕೋದ್ಯಮ, ಪತ್ರಿಕೆಗಳಲ್ಲಿ ಜಿಲ್ಲೆಯ ಪತ್ರಕರ್ತರೇ ಜಾಸ್ತಿ ಇದ್ದಾರೆ. ಲಿಂಗನಮಕ್ಕಿ ಡ್ಯಾಂ, ನಿರಾಶ್ರಿತರಾಗುವ ಆತಂಕದಲ್ಲಿದ್ದ ಆ ಕಾಲಾದಲ್ಲಿ ಜಿ ಎಸ್ ಹೆಗಡೆ ಅಜ್ಜಿಬಳ್ ಅವರು ಎಲ್ಲ ಪತ್ರಕರ್ತರನ್ನೂ ಒಗ್ಗೂಡಿಸಿ ಯೋಜನೆಯನ್ನು ಸಮರ್ಥವಾಗಿ ವಿರೋಧಿಸಿ ಪತ್ರಿಕೆಯ ಮೂಲಕ ಪ್ರತಿನಿಧಿಸಿದ್ದರು. ಎಲ್ಲ ಹೋರಾಟದ ಧ್ವನಿ, ಬೆಂಗಳೂರು, ದೆಹಲಿಗೆ ಮುಟ್ಟಿಸುವ ಮೂಲಕ ಸಂಘದ ಮೂಲಕ ಯತ್ನಿಸಿ ಬೇಡ್ತಿ ಯೋಜನೆ ವಿರುದ್ದ ಹೋರಾಡಿದ್ದರು. ಅಂದು ದೇವರಾಜ ಅರಸು ಪತ್ರಿಕೆಗಳ ಹೋರಾಟದ ಫಲವಾಗಿ ಯೋಜನೆ ಕೈ ಬಿಟ್ಟು ಶರಾವತಿ ಟೇಲ್ ರೇಸ್ ಕಡೆ ಗಮನ ಹರಿಸಿದರು. ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ, ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಸದಾ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇಂದು ಸ್ಥಳೀಯ ಪತ್ರಿಕೆಗಳು, ಸ್ಥಳೀಯ ಆವೃತ್ತಿಗಳಿಂದಾಗಿ ಪ್ರತಿ ಪತ್ರಿಕೆಯೂ ಕನಿಷ್ಟ ಮೂರು ಪುಟ ಉತ್ತರ ಕನ್ನಡಕ್ಕೆ ಮೀಸಲಿಡುತ್ತಿವೆ.
ಪ್ರಜಾಪ್ರಭುತ್ವದ ಇತರ ಮೂರು ಅಂಗಗಳಿಗೆ ಆರ್ಥಿಕ ಸೌಲಭ್ಯ, ನಿವೃತ್ತಿ ನಂತರ ಇಎಸ್ಐ, ಆರೋಗ್ಯದ ಸೌಲಭ್ಯ ಕೊಡಬೇಕಾಗಿದೆ. ಸತ್ತಾಗ ಹೆಣ ಸುಡಲೂ ದುಡ್ಡಿರದ ಸ್ಥಿತಿಯಿಂದಲೂ ಇಲ್ಲಿ ಪತ್ರಿಕೋದ್ಯಮ ಮಾಡಿದ್ದಾರೆ. ಇಂದಿಗೂ ಪತ್ರಕರ್ತ ಹೊಟ್ಟೆಪಾಡಿಗೆ ಬೇರೆ ಆದಾಯ ಕಂಡುಕೊಳ್ಳುವ ಅಗತ್ಯತೆ ಇದೆ. ಆರೋಗ್ಯ ಸುರಕ್ಷೆ, ನಿವೃತ್ತಿ ವೇತನ ಸರ್ಕಾರದಿಂದ ಸಿಗುವಂತೆ ಮಾಡಲು ಮಂಕಾಳು ವೈದ್ಯ ಯತ್ನಿಸಲಿ ಎಂದರು.
ಶಾಸಕ ಭೀಮಣ್ಣ ನಾಯ್ಕ, ಪತ್ರಿಕಾ ರಂಗ ಸಮಾಜದ ದಿಕ್ಕನ್ನು ನೀಡಲು ಪ್ರಮುಖ ಪಾತ್ರ ವಹಿಸಿದೆ. ಉತ್ತರ ಕನ್ನಡ ಜಿಲ್ಲೆ ಪತ್ರಿಕೋದ್ಯಮದ ಕೊಡುಗೆ ಹೆಮ್ಮೆ ಎನಿಸುತ್ತದೆ. ಸಮಾಜವನ್ನು ಮುಖ್ಯವಾಹಿನಿಗೆ ತರಲು ಪತ್ರಿಕೋದ್ಯಮ ಹೆಚ್ಚಿನ ಒತ್ತು ನೀಡಿದೆ. ಸಮಾಜಕ್ಕೆ ಜಿಲ್ಲೆಯ ಪತ್ರಿಕೋದ್ಯಮ ಸಲ್ಲಿಸಿದ ಸೇವೆ ಅಪಾರ. ಇಡೀ ರಾಜ್ಯದಲ್ಲಿ ಪತ್ರಿಕೋದ್ಯಮಕ್ಕೆ ನಮ್ಮ ಜಿಲ್ಲೆಯ ಕೊಡುಗೆ ಶ್ಲಾಘನೀಯ.
ಜಿಲ್ಲಾ ಮಟ್ಟದ ತಾಲೂಕು ಮಟ್ಠದ ಪತ್ರಕರ್ತರಿಗೆ ಸೂಕ್ತ ಸಹಾಯ ಸಿಗುತ್ತಿಲ್ಲ. ಸರ್ಕಾರದಿಂದ ಬರುವ ಸಹಾಯಧನ ತಾಲೂಕು ಮಟ್ಟದ ಪತ್ರಕರ್ತರಿಗೂ ಸಿಗುವಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಿದೆ. ಜಿಲ್ಲೆಯ ಪ್ರವಾಸೋದ್ಯಮ, ಅಭಿವೃದ್ಧಿಗೆ ಸಿಗಬೇಕಾದ ನ್ಯಾಯವನ್ನು ನಮ್ಮ ಪತ್ರಕರ್ತರು ರಾಜ್ಯ ಮಟ್ಟದಲ್ಲಿ ಬಿಂಬಿಸಿದ್ದಾರೆ. ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯಲಿ ಎಂದರು.
ಜಿಲ್ಲಾ ಸಂಘದ ಅಧ್ಯಕ್ಷ ಜಿ.ಸು.ಬಕ್ಕಳ ಮಾತನಾಡಿ, ಪತ್ರಕರ್ತ ಮಾತ್ರವಲ್ಲ. ಪತ್ರಿಕಾ ಮಾಲಕರೂ ಸಹ ಇಂದು ಸಂಕಷ್ಟದಲ್ಲಿದ್ದಾರೆ. ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವೆನಿಸಿದೆ. ಈ ಸಂಘ ಇಂದು ತನ್ನ ಸ್ವಂತ ಕಾಲಿನ ಮೇಲೆ ನಿಂತಿದೆ ಎಂದರು. ಪತ್ರಕರ್ತರ ಕ್ಷೇಮ ನಿಧಿಯನ್ನು ಸಂಗ್ರಹಿಸುವ ಮೂಲಕ ಪತ್ರಕರ್ತರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಮಂಡಳಿ ನಿರ್ಧರಿಸಿದೆ. ಪತ್ರಿಕಾ ಮಂಡಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯದ ಅಗತ್ಯತೆ ಇತ್ತು. ಕೆಡಿಸಿಸಿ ಬ್ಯಾಂಕ್ ಸಾಲ ನೀಡಲು ಮುಂದಾಗಿದ್ದರೂ ಪತ್ರಕರ್ತರು ತಮ್ಮ ಬೈಕ್ ಗಳನ್ನು ಜಾಮೀನಾಗಿ ನೀಡಬೇಕಾಯಿತು. ಪತ್ರಿಕಾ ಭವನ ಇನ್ನೂ ಸಂಪೂರ್ಣಗೊಳ್ಳಲು ಕನಿಷ್ಟ 1 ಕೋಟಿ ರೂ. ಬೇಕಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಪತ್ರಿಕಾ ಮಂಡಳಿ ಇದುವರೆಗೂ ನಡೆದು ಬಂದ ದಾರಿ,ಸಂಘದ ಧ್ಯೇಯೋದ್ದೇಶಗಳು, ಸಂಘದ ಹಿಂದಿನ ಅಧ್ಯಕ್ಷರ ಬಗ್ಗೆ ವರದಿ ವಾಚಿಸಿದರು. ವೇದಿಕೆಯಲ್ಲಿ ಕೆಯುಡಬ್ಲುಜೆ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ, ನಿಕಟಪೂರ್ವ ಅಧ್ಯಕ್ಷ ಆರ್.ಕೆ.ಭಟ್ಟ, ಜಿಲ್ಲಾ ಸಂಘದ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಖಜಾಂಚಿ ರಾಜೇಂದ್ರ ಶಿಂಗನಮನೆ ಇತರರು ಇದ್ದರು. ಚಿನ್ಮಯ ಕೆರೆಗದ್ದೆ ಪ್ರಾರ್ಥಿಸಿದರು. ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಶೈಲಜಾ ಗೋರ್ನಮನೆ, ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.
ಜಿಲ್ಲೆಯ ಪತ್ರಕರ್ತರು ಪ್ರಜ್ಞಾವಂತರು. ಹಿರಿಯ ಪತ್ರಕರ್ತರ ಸೂಚನೆಯನ್ನು ಪಾಲಿಸುವ ರಾಜಕಾರಣಿಗಳು ನಾವಾಗುತ್ತೇವೆ.–ಭೀಮಣ್ಣ ನಾಯ್ಕ, ಶಾಸಕ
ಜಿಲ್ಲೆಯ ಹೋರಾಟದಲ್ಲಿ ನಿರಂತರವಾಗಿ ಬೆಂಬಲವಾಗಿ ನಿಂತಿದ್ದು ಮಾಧ್ಯಮಗಳು. ಸಮಸ್ಯೆಯನ್ನು ಸರಕಾರಕ್ಕೆ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡಿವೆ. ಸಮರ್ಪಣಾ ಮನೋಭಾವನೆಯಿಂದ ಕೆಲಸ ಮಾಡಿವೆ.–
ಜೀಯು ಭಟ್ಟ ಹೊನ್ನಾವರ, ಹಿರಿಯ ಪತ್ರಕರ್ತರು.
ಪತ್ರಕರ್ತರಿಗೋಸ್ಕರ ಅವರ ಸಂಕಷ್ಟಕ್ಕೆ ಸ್ಪಂದಿಸಲು ಕನಿಷ್ಠ 50 ಲ.ರೂ. ಕ್ಷೇಮ ನಿಧಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ.– ಜಿ.ಸುಬ್ರಾಯ ಭಟ್ಟ ಬಕ್ಕಳ, ಅಧ್ಯಕ್ಷರು