ದಾಂಡೇಲಿ: ಅವರು ಸರಿ ಸುಮಾರು 45 ವರ್ಷಗಳ ಕಾಲ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬದುಕನ್ನು ರೂಪಿಸಿಕೊಂಡವರು. ಮಕ್ಕಳು ದೊಡ್ಡವರಾದ ನಂತರ ಅಪ್ಪ ನೀವು ದುಡಿಯುವುದು ಸಾಕು, ಈಗ ನಾವುಗಳು ದುಡಿಯುತ್ತಿದ್ದೇವೆ ಎಂದು ಪ್ರತಿನಿತ್ಯ ಅಪ್ಪನ ಬಳಿ ಮನವಿಯನ್ನು ಮಾಡುತ್ತಲೇ ಬಂದರೂ ವೃತ್ತಿಯನ್ನು ಬಿಡದ ಅಪ್ಪನಿಗೆ ಹೇಗಾದರೂ ಮಾಡಿ ವೃತ್ತಿ ಬದುಕಿಗೆ ವಿಶ್ರಾಂತಿ ಕೊಡಬೇಕೆಂದು ಹಂಬಲಿಸಿ ಕಿರಿಯ ಮಗ ಉಪವಾಸ ಕೂತ್ಕೊಳ್ಳುವ ಮೂಲಕ ತಂದೆ ವೃತ್ತಿ ಬದುಕಿಗೆ ವಿಶ್ರಾಂತಿ ಪಡೆಯುವ ಹಂತಕ್ಕೆ ತಂದು ನಿಲ್ಲಿಸಿದ್ದನು.
ಇದು ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿ ಕಳೆದ 45 ವರ್ಷಗಳಿಂದ ಎ1 ಕಟ್ಟಿಂಗ್ ಶಾಪ್ ನಲ್ಲಿ ಕ್ಷೌರಿಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬಂದ 64ರ ವಯಸ್ಸಿನ ಹೀರಲಾಲ್ ಪರಮಾರ್ ಅವರ ಜೀವನ ಕಥೆ.
ನಗುನಗುತ್ತಲೇ ಗ್ರಾಹಕರ ಮನ ಗೆದ್ದ ಹೀರಲಾಲ್ ಅವರು ಕ್ಷೌರಿಕ ವೃತ್ತಿಗೆ ವಿದಾಯ ಹಾಡಿದ ನಂತರ ನಾನ್ಯಾಕೆ ಸುಮ್ಮನೆ ಕುಳಿತು ಸಮಯ ಹರಣ ಮಾಡಲಿ ಎಂದು ಯೋಚಿಸಿ, ತನ್ನ ಮುದ್ದಿನ ಮಡದಿ ಗೀತಾದೇವಿ ಪರಮಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ತನ್ನ ಕಟ್ಟಿಂಗ್ ಶಾಪ್ ಮುಂಭಾಗದ ಖಾಲಿ ಇರುವ ಜಾಗದಲ್ಲಿ ಮಕ್ಕಳು, ಮಹಿಳೆಯರು ಧರಿಸುವ ವಸ್ತುಗಳು ಹಾಗೂ ಇನ್ನಿತರ ಆಟೋಟ ಸಾಮಗ್ರಿಗಳನ್ನು ಮಾರಾಟ ಮಾಡುವ ಬಯಲು ಅಂಗಡಿಯನ್ನು ತೆರೆಯುವ ಮೂಲಕ ಸ್ವಾಭಿಮಾನದ ಬದುಕು ನಡೆಸಬೇಕೆಂಬ ಸಂಕಲ್ಪದಲ್ಲಿ ಚಿಕ್ಕದಾದ ಮತ್ತು ಅಷ್ಟೇ ಚೊಕ್ಕದಾದ ಒಂದು ಸಣ್ಣ ವ್ಯವಹಾರವನ್ನು ಆರಂಭಿಸಿ, ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ.
ದುಡಿಮೆಗೆ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಹೀರಲಾಲ್ ಪರಮಾರ್ ಮತ್ತು ಗೀತಾದೇವಿ ಪರಮಾರ್ ದಂಪತಿಗಳ ಸ್ವಾವಲಂಬಿ ಬದುಕು ಉತ್ತಮ ಉದಾಹರಣೆಯಾಗಿದೆ.