ಕಾರವಾರ: ಕಾರವಾರದ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಾಕ್ಷಿಯಾಗಿ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವವು ಕೂರ್ಮಗಡ ದ್ವೀಪದಲ್ಲಿ ನಡೆಯುವುದರಿಂದ, ಭಕ್ತರನ್ನು ಬೈತಖೋಲ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕಾ ಬೊಟ್‌ನಲ್ಲಿ ಉಚಿತವಾಗಿ ಭಕ್ತರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ನರಸಿಂಹ ದೇವರನ್ನು ಕಡವಾಡದಿಂದ ದೋಣಿ ಮೂಲಕ ಕೊಂಡೊಯ್ದು ದ್ವೀಪದಲ್ಲಿರುವ ಗುಡಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನರಸಿಂಹ ದೇವರು ಮೀನುಗಾರರ ಆರಾಧ್ಯ ದೈವವಾಗಿದ್ದು ಉತ್ತಮ ಮೀನುಗಾರಿಕೆ ನಡೆಯುವಂತೆ ಪ್ರತಿ ವರ್ಷದಂತೆ ಬಾಳೆಗೊನೆಯನ್ನು ಹರಕೆಯಾಗಿ ಸಲ್ಲಿಸಲಾಯಿತು.
ಜಾತ್ರೆಗೆ ತೆರಳುವ ಭಕ್ತರ ಕುರಿತು ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಲಾಗಿದ್ದು, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಬೈತಖೋಲನಲ್ಲಿ ಬೋಟ್ ಹತ್ತುವಾಗ ಹಾಗೂ ಇಳಿಯುವಾಗ ಭಕ್ತರ ವಿವರಗಳನ್ನು ದಾಖಲಿಸಿಕೊಂಡರು. ಸ್ಥಳೀಯರೊಂದಿಗೆ ಅಲ್ಲದೇ ಹೊರರಾಜ್ಯಗಳಿಂದ ಸಹ ಭಕ್ತರು ಜಾತ್ರೆಗೆ ಆಗಮಿಸಿದ್ದರು.