ಸಿದ್ದಾಪುರ: ಸ್ಥಳೀಯ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಅಪರ್ಣ ರಮೇಶ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು. ಪಟ್ಟಣ ಪಂಚಾಯತ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕು ಎಂದು ಎಸಿ ಅಪರ್ಣ ರಮೇಶ ಸೂಚಿಸಿದರು.
ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಮಾತನಾಡಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ ಈಗಾಗಲೇ ಕುಡಿಯುವ ನೀರಿನ ತೊಂದರೆ ಎಲ್ಲೆಲ್ಲಿ ಆಗಬಹುದು ಎಂದು ಮಾಹಿತಿ ಕೇಳಲಾಗಿದ್ದು 97 ಗ್ರಾಮಗಳಲ್ಲಿ ನೀರಿನ ತೊಂದರೆ ಆಗುವ ಸಾಧ್ಯತೆ ಇದೆ. ಈ ಕುರಿತು ಮುಂಜಾಗೃತೆ ವಹಿಸಿ ಮಾಹಿತಿ ನೀಡುವಂತೆ ಪಿಡಿಒಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ ಮಾತನಾಡಿ ಪಪಂ ವ್ಯಾಪ್ತಿಯ 15ವಾರ್ಡಿಗೆ ಅರೆಂದೂರು ನಾಲಾದಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್ ಅಂತ್ಯದವರೆಗೆ ನೀರು ಸಾಕಾಗಬಹುದು ಎಂದು ಅಂದಾಜಿಸಲಾಗಿದೆ. ಕುಡಿಯುವ ನೀರಿನ ತೊಂದರೆ ಕಂಡುಬಂದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುವುದು. ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಶರಾವತಿ ನದಿಯಿಂದ ನೀರನ್ನು ಪಟ್ಟಣಕ್ಕೆ ತರುವ ಯೋಜನೆಗೆ ಈಗಾಗಲೇ ಕ್ರಿಯಾಯೋಜನೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ತಾಲೂಕಿನಲ್ಲಿ ಶೇ.92ರೈತರು ಪ್ರೂಟ್ ಐಡಿ ಮಾಡಿಸಿಕೊಂಡಿದ್ದಾರೆ.ಉಳಿದವರಿಗೆ ಮಾಹಿತಿ ನೀಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಆಗುತ್ತಿಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಹೇಳಿದರು.ಶಿಕ್ಷಣ, ಅರಣ್ಯ, ಆರೋಗ್ಯ, ಹೆಸ್ಕಾಂ, ಪಶುಸಂಗೋಪನೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು. ತಹಸೀಲ್ದಾರ ಎಂ.ಆರ್.ಕುಲಕರ್ಣಿ ಉಪಸ್ಥಿತರಿದ್ದರು.