ಹೊನ್ನಾವರ: ಮನುಷ್ಯನು ಸುಖಮಯ ಜೀವನವನ್ನು ನಡೆಸಲು ಶಿಕ್ಷಣ ತೀರಾ ಅಗತ್ಯವಾಗಿದೆ. ಪ್ರತಿಯೊಬ್ಬ ಮಗುವೂ ಶಿಕ್ಷಣವನ್ನು ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಹೇಳಿದರು. ತಾಲೂಕಿನ ಮಂಕಿ ಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಂಕಿ ಮಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದು ಸಂತಸದ ಬೆಳವಣಿಗೆ. ಇದು ಇಲ್ಲಿನ ಶಿಕ್ಷಕರು, ಎಸ್.ಡಿ.ಎಂ.ಸಿ ಮತ್ತು ಪಾಲಕರ ಕಾಳಜಿಯಿಂದ ಸಾಧ್ಯವಾಗಿದೆ. ಸರ್ಕಾರಿ ಶಾಲೆಯು ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂದರು.
ಪತ್ರಕರ್ತ ಎಚ್.ಎಂ. ಮಾರುತಿ ವಿದ್ಯಾರ್ಥಿಗಳ ಹಸ್ತ ಪತ್ರಿಕೆ `ಕಡಲ ಮಡಿಲು’ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ. ಇಂದಿನ ಆಧುನಿಕ ಯುಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಯುವಕರು ನಗರೀಕರಣದಲ್ಲಿ ಕರಗಿಹೋಗುತ್ತಿದ್ದಾರೆ. ಮಾನವೀಯ ಸಂಬಂಧಗಳನ್ನು ಬೆಸೆಯುವ ಶಿಕ್ಷಣವನ್ನು ನೀಡಿ ಉತ್ತಮ ವಾತಾವರಣ ನಿರ್ಮಿಸಬೇಕಿದೆ. ಸರ್ಕಾರಿ ಶಾಲೆಗಳು ಆ ನಿಟ್ಟಿನಲ್ಲಿ ಭರವಸೆ ಮೂಡಿಸುತ್ತಿವೆ ಎಂದರು. ಪ.ಪಂ.ಮುಖ್ಯಾಧಿಕಾರಿ ಎಚ್. ಅಕ್ಷತಾ ಮಾತನಾಡಿ, ಶಾಲಾ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ಸಾಧನೆ ಮಾಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ ನಾಯ್ಕ, ಪ್ರಧಾನ ಅರ್ಚಕ ಹೇಮಂತ ಭಟ್ಟ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸುಧೀಶ ನಾಯ್ಕ, ಬಿ.ಆರ್.ಪಿ ಗಜಾನನ ನಾಯ್ಕ, ಶಿಕ್ಷಕರ ಸಂಘದ ಶಂಕರ ನಾಯ್ಕ ಇದ್ದರು. ಮುಖ್ಯಾಧ್ಯಾಪಕ ಉದಯ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎನ್.ಎಸ್.ನಾಯ್ಕ ವಂದಿಸಿದರು. ಶಿಕ್ಷಕ ಅಣ್ಣಪ್ಪ ನಾಯ್ಕ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುಜಾತಾ ಟಿ.ಜಿ. ವರದಿ ವಾಚಿಸಿದರು. ಸಹ ಶಿಕ್ಷಕಿ ಸುಮಿತ್ರಾ ನಾಯ್ಕ ಬಹುಮಾನ ವಿತರಣೆ ನಿರ್ವಹಿಸಿದರು. ಅತಿಥಿ ಶಿಕ್ಷಕರಾದ ಸುನಿತಾ ಮೇಸ್ತ, ಪುಷ್ಪಾ ನಾಯ್ಕ ಸಹಕರಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.