ಕಾರವಾರ: ಸೋಮವಾರ ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ಹಾಗೂ ಗ್ರಾಮದೇವರಾದ ಮಹಾದೇವ, ಲಕ್ಷ್ಮಿ ನಾರಾಯಣ, ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ತಾಲೂಕಿನ ಗ್ರಾಮೀಣ ಭಾಗದಲ್ಲಿಯೇ ದೇವಳಮಕ್ಕಿ ಗ್ರಾಮದ ಅದ್ದೂರಿ ಶ್ರೀರಾಮ ಮಂದಿರ ಸಂಭ್ರಮಾಚರಣೆಗೆ ಅಲ್ಲಿನ ಯುವಕ ಬಳಗದವರ ಮತ್ತು ಸಮಸ್ತ ಗ್ರಾಮಸ್ಥರು ಸಹಕರಿಸಿದರು. ಇಡೀ ಗ್ರಾಮವು, ಎಲ್ಲಾ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರ , ದಿಕ್ಕು ದಿಕ್ಕುಗಳಲ್ಲಿ ಶ್ರೀರಾಮ ಪೋಟೋ ಇರುವ ಕೇಸರಿ ಬಾವುಟ ಹಾಗೂ ಬ್ಯಾನರ್ಗಳು ರಾರಾಜಿಸಿದವು.
ಸೋಮವಾರದಂದು ಬೆಳಿಗ್ಗೆ ದೇವಳಮಕ್ಕಿ ಯುವಕ ಬಳಗದಿಂದ ಶ್ರೀರಾಮ ಮೆರವಣಿಗೆ, ನಂತರ ಗ್ರಾಮ ದೇವರ ವಿಶೇಷ ಪೂಜೆ ಆದನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಗ್ರಾಮದ ಶಾಲಾ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಂದ ವಿಶೇಷ ಭಜನೆ ಮತ್ತು ರಾಮ ಮಂತ್ರ ಪಠಣ ನಡೆಯಿತು.ರಾತ್ರಿಯ ಸಮಯದಲ್ಲಿ ಸಮಸ್ತ ಗ್ರಾಮಸ್ಥರಿಂದ ಒಗ್ಗಟ್ಟಾಗಿ ದೀಪೋತ್ಸವ ಆಚರಿಸಲಾಯಿತು. ರಾಮ ವೇಷಧಾರಿ ಮತ್ತು ರಾಮ ಮತ್ತು ಹನುಮಾನ್ ದೇವರ ರಂಗೋಲಿ ಚಿತ್ರ ಎಲ್ಲರ ಮನಗೆದ್ದಿತ್ತು. ನಂತರ ರಾತ್ರಿ ದೇವರ ಪೂಜೆ , ಪ್ರಸಾದ ವಿತರಣೆ ನಡೆದವು.