ಬನವಾಸಿ: ನಾವೆಲ್ಲರೂ ಭಾರತೀಯರು. ಭಾರತೀಯ ಸಂಸ್ಕೃತಿಯನ್ನು ಮತ್ತು ಭಾರತದ ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಹಾಗೂ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿದ್ದವೀರೇಶ ನೆರಗಲ್ ಹೇಳಿದರು.
ಪಟ್ಟಣದ ಜನತಾ ಕಾಲೋನಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಮಾತನಾಡಿದ ಅವರು ಭಾರತೀಯರೆಲ್ಲರೂ ಶ್ರೀರಾಮನ ಸಂದೇಶ ನೀಡುವುದು ಬಹಳ ಮುಖ್ಯವಾಗಿದೆ. ದೇಶದಲ್ಲಿ ಅನೇಕ ಮಹಾತ್ಮರು, ಶರಣರು ದೇಶಕ್ಕಾಗಿ ಒಂದು ಸಂದೇಶವನ್ನು ನೀಡಿದ್ದಾರೆ. ಆ ಸಂದೇಶವನ್ನು ಗೌರವಿಸುವ ನಿಟ್ಟಿನಲ್ಲಿ ದೇಶದ ಸಂಸ್ಕೃತಿಗಾಗಿ ನಾವೆಲ್ಲರೂ ಸೇರಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಿಟ್ಟಿನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಗಿದೆ. ದೇಶದಲ್ಲಿ ಅತಿ ಶ್ರದ್ಧಾಭಕ್ತಿಯಿಂದ ಶ್ರೀರಾಮನ ಜಪ ನಡೆದಿದೆ ಎಂದರು. ನೆಚ್ಚಿನ ಪ್ರಧಾನಿಯವರ ದಿಟ್ಟ ನಿರ್ಧಾರದಿಂದ ಇದೆಲ್ಲಾ ಸಾಧ್ಯವಾಗಿದೆ ಎಂದರು.
ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ವಿಷೇಶ ಅಲಂಕಾರ, ಪೂಜೆ ನೆರವೇರಿಸಿ, ಶ್ರೀ ಉಮಾಮಹೇಶ್ವರಿ ಮಹಿಳಾ ಮಂಡಳಿ ಹಾಗೂ ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ಸದಸ್ಯರಿಂದ ಶ್ರೀ ರಾಮ ಭಜನೆ ನಡೆಯಿತು. ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಗಣಪತಿ ನಾಯ್ಕ್, ಸುಧೀರ್ ನಾಯರ್, ಶಿವರಾಜ ಆಚಾರ್ಯ, ಇಕೋ ಮಂಜು, ಶಿವಣ್ಣ, ರಮೇಶ ಪಟೇಲ್, ಅಣ್ಣಪ್ಪ, ವಸಂತ್ ಜೋಗಿ, ರವಿ ನಾಯ್ಕ್, ಚಂದ್ರು, ಗಣಪತಿ ಮಡಿವಾಳ, ಮಲ್ಲಿಕ್, ಕಾರ್ತಿಕ, ಪ್ರತೀಕ್ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು, ಸ್ನೇಹ ಜೀವಿ ಗೆಳೆಯರ ಬಳಗ, ಕದಂಬ ರಕ್ತ ನಿಧಿ, ಯುಗಾದಿ ಉತ್ಸವ ಸಮಿತಿ, ವರ್ಮ ಬಾಯ್ಸ್ ಸದಸ್ಯರು, ಸಾವಿರಾರು ಭಕ್ತರು ಇದ್ದರು.