ಶಿರಸಿ: ಶ್ರೀರಾಮ ಜನ್ಮಭೂಮಿಯು ಹೊಸ ಕಳೆಯಿಂದ ಶೋಭಿಸುತ್ತಿದೆ. ನಾವೆಲ್ಲರೂ ಬಹುದಿನದಿಂದ ಕಾಯುತ್ತಿರುವ ರಾಮನ ಪ್ರತಿಷ್ಠಾಪನೆಯು ಸೋಮವಾರ ವಿಜೃಂಭಣೆಯಿಂದ ನೆರವೇರಿದೆ. ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸ್ವರ್ಣವಲ್ಲೀ ಮಠದಲ್ಲಿ ಹಮ್ಮಿಕೊಂಡ ೨೪ ಗಂಟೆ ಶ್ರೀರಾಮ ಭಕ್ತಿ ಜಾಗರಣ ಕಾರ್ಯಕ್ಕೆ ಶ್ರೀಸೀತಾರಾಮಚಂದ್ರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು.
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಸುಂದರ ಬಾಲ ರಾಮನ ಪ್ರತಿಷ್ಠೆ ಸಂತಸ ತಂದಿದೆ. ವಿಶೇಷವಾಗಿ ದೃಶ್ಯ ಮಾಧ್ಯಮದಲ್ಲಿ ನಾವು ಪ್ರತಿಷ್ಠೆಯ ಕ್ಷಣ ವೀಕ್ಷಿಸುವಾಗ ಒಂದು ಕ್ಷಣ ಮೈ ರೋಮಾಂಚನವಾಗಿ ಶ್ರೀರಾಮನೇ ಪ್ರತ್ಯಕ್ಷವಾಗಿ ಬಂದಂತೆ ಭಾಸವಾಯಿತು. ಶಾಸ್ತ್ರಗಳು ಹೇಳುವಂತೆ ಒಂದು ಮೂರ್ತಿ ಲಕ್ಷಣವಾಗಿದ್ದರೆ ಅಂತಹ ಮೂರ್ತಿಯಲ್ಲಿ ದೇವರ ಸಾನ್ನಿಧ್ಯ ಹೆಚ್ಚು ಎಂದರು. ಅಷ್ಟು ಸುಂದರವಾಗಿ ಬಾಲರಾಮನ ಮೂರ್ತಿ ಬಂದಿದೆ. ಸ್ವರ್ಣವಲ್ಲೀ ಶ್ರೀಮಠದಲ್ಲೂ ಭಜನೆ, ಶ್ರೀರಾಮನ ಮೇಲೆ ತಾಳಮದ್ದಲೆ ನಡೆಯಲಿದೆ. ಸೋಮವಾರ ಬೆಳಿಗ್ಗೆ ೬ಕ್ಕೆ ಆರಂಭವಾಗಿ ಮಂಗಳವಾರ ಬೆಳಿಗ್ಗೆ ೬ರ ತನಕ ನಡೆಯಲಿದೆ. ಶ್ರೀರಾಮ ಭಕ್ತಿ ಸ್ಮರಣ ನಿರಂತರವಾಗಿ ನಡೆಯುತ್ತಿದೆ. ಭಜನೆ ಹಾಗೂ ತಾಳಮದ್ದಲೆ ಸಂಯೋಜನೆಗೂ ಹಿನ್ನಲೆ ಇದೆ. ತಾಳಮದ್ದಲೆ ಸಿದ್ಧಾಂತವಾದರೆ, ಭಜನೆ ಕ್ರಿಯಾರೂಪ. ಆಧ್ಯಾತ್ಮದಲ್ಲಿ ಈ ಎರಡಕ್ಕೂ ಮಹತ್ವದ ಸ್ಥಾನವಿದೆ. ಸಿದ್ಧಾಂತವಿಲ್ಲದ ಕ್ರಿಯಾರೂಪ ಹಾಗೂ ಕ್ರಿಯಾರೂಪ ಇಲ್ಲದ ಸಿದ್ಧಾಂತ ಎರಡೂ ವ್ಯರ್ಥ. ಲೋಕವೇ ರಾಮನ ಕಡೆ ಗಮನಿಸಬೇಕಾದರೆ ಅವನ ಒಂದಲ್ಲ ಒಂದು ಚಿಂತನೆಯ ಮೂಲಕ ನಾವು ತೊಡಗಿಕೊಳ್ಳಬೇಕು. ಆಧ್ಯಾತ್ಮ ಚಿಂತನೆಯಲ್ಲಿ ನಮ್ಮ ಚಿಂತನೆ ಸೇರಿದರೆ ಧನ್ಯತೆ ಇದೆ. ಹಾಗೂ ಲೋಕ ಕಲ್ಯಾಣವೂ ಇದೆ ಎಂದರು.
ಈ ವೇಳೆ ಆರ್.ಎನ್.ಭಟ್ಟ ಸುಗಾವಿ, ವಿ.ಶಂಕರ ಭಟ್ಟ ಉಂಚಳ್ಳಿ, ಪ್ರಕಾಶ ಹೆಗಡೆ ಯಡಳ್ಳಿ ಇತರರು ಇದ್ದರು. ಜಿಲ್ಲೆಯ ವಿವಿಧ ಕಲಾವಿದರುಗಳಿಂದ ಸೋಮವಾರ ಬೆಳಿಗ್ಗೆ ೬ರಿಂದ ಮುಂಜಾನೆಯಿಂದ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳು ಭಕ್ತಿಭಾವದಲ್ಲಿ ಆರಂಭವಾಗಿದ್ದು 16 ತಾಸು ಭಜನೆ, 8 ತಾಸು ಶ್ರೀರಾಮನ ಮೇಲಿನ ತಾಳಮದ್ದಲೆ ಮಂಗಳವಾರ ಬೆಳಗಿನ ೬ ಗಂಟೆ ತನಕ ಶ್ರೀಮಠದಲ್ಲಿ ನಡೆಯಲಿದೆ.