ಯಲ್ಲಾಪುರ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಪಟ್ಟಣದ ಕಲ್ಮಠ, ಗ್ರಾಮದೇವಿ ದೇವಸ್ಥಾನ, ಬಸವೇಶ್ವರ ಸರ್ಕಲ್, ಈಶ್ವರ ದೇವಸ್ಥಾನ, ಶಕ್ತಿ ಗಣಪತಿ ದೇವಸ್ಥಾನ, ಅಂಬೇಡ್ಕರ್ ಸರ್ಕಲ್, ನಾಯಕನಕೆರೆ ದತ್ತ ಮಂದಿರ, ಶಾರದಾಂಬಾ ದೇವಸ್ಥಾನ, ಅಜ್ಜಪ್ಪನಕೆರೆ ಗಣಪತಿ ದೇವಸ್ಥಾನ, ಕಾಳಮ್ಮನಗರ ಕಾಳಮ್ಮದೇವಿ ದೇವಸ್ಥಾನ ಸೇರಿದಂತೆ ವಿವಿಧೆಡೆ ರಾಮತಾರಕ ಜಪ, ಯಜ್ಞ, ರಾಮ ಭಜನೆ, ಅನ್ನ ಸಂತರ್ಪಣೆ ನಡೆಯಿತು.
ಗ್ರಾಮೀಣ ಭಾಗದಲ್ಲಿ ಚಂದಗುಳಿ ಘಂಟೆ ಗಣಪತಿ ದೇವಸ್ಥಾನ, ಮಾಗೋಡ ವೀರ ಮಾರುತಿ ದೇವಸ್ಥಾನ, ನಂದೊಳ್ಳಿ, ಇಡಗುಂದಿ, ಮಲವಳ್ಳಿ, ಹುತ್ಕಂಡ, ಬಿಲ್ಲಿಗದ್ದೆಯ ರಾಮಲಿಂಗೇಶ್ವರ ದೇವಸ್ಥಾನ, ಅಣಲಗಾರ, ಆನಗೋಡ ಗೋಪಾಲಕೃಷ್ಣ ದೇವಸ್ಥಾನ, ಕವಡಿಕೆರೆ ದುರ್ಗಾದೇವಿ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿಯೂ ರಾಮ ಧ್ಯಾನ, ಭಜನೆ, ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ವೀಕ್ಷಣೆ, ಅನ್ನ ಸಂತರ್ಪಣೆ ನಡೆಯಿತು. ಕವಡಿಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಕವಡಿಕೆರೆಯ ನಾಗರಾಜ ಭಟ್ಟ ಅವರು ಚಿತ್ರಿಸಿದ ರಾಮ-ಆಂಜನೇಯರ ರಂಗೋಲಿ ಗಮನ ಸೆಳೆಯಿತು. ಸ್ನೇಹ ಸದನ ಕಾಂಪ್ಲೆಕ್ಸ್ ಬಳಿ ಅಂಗಡಿಕಾರರು ಕೇಸರಿಬಾತ್ ವಿತರಿಸಿದರು. ಅಂಬೇಡ್ಕರ್ ಸರ್ಕಲ್ ಬಳಿ ಆಟೊರಿಕ್ಷಾ ಚಾಲಕರು ತಂಪು ಪಾನೀಯ ವಿತರಿಸಿದರು.