ಸಿದ್ದಾಪುರ; ಮೂರನೇ ಬಾರಿಯೂ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಆಡಳಿತಕ್ಕೆ ಬರಬೇಕು. ಅಧಿಕಾರದ ಹಪಾಹಪಿಗಾಗಿ ಈ ಮಾತು ಹೇಳುತ್ತಿಲ್ಲ. ದೇಶದ, ಹಿಂದುತ್ವದ ದೃಷ್ಟಿಯಿಂದ ಮೋದಿಯವರ ಆಡಳಿತ ಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಅವರು ಸಿದ್ದಾಪುರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಾವಿರ ವರ್ಷಗಳ ಈಚೆಗೆ ಇಡೀ ಹಿಂದೂ ಸಮಾಜ ಎದ್ದು ನಿಂತಿದೆ. 2014 ರ ನಂತರ ಸ್ವಾಭಿಮಾನದ ಸರ್ಕಾರ ದೊರೆಯುವಂತಾಗಿದೆ. ಸ್ವಾತಂತ್ರ್ಯಾನಂತರ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷ ಜಗತ್ತಿನ ಬೇರೆ ಬೇರೆ ಶಕ್ತಿಗಳೊಂದಿಗೆ ಸೇರಿಕೊಂಡು ನಮ್ಮನ್ನು ತುಳಿಯುತ್ತಿತ್ತು. ಲಾಲ್ ಬಹದ್ದೂರ ಶಾಸ್ತ್ರೀ, ಹೋಮಿ ಜಹಾಂಗೀರ ಬಾಬಾ, ವಿಕ್ರಮ ಸಾರಾಭಾಯಿ ಮುಂತಾದವರ ಕೊಲೆಯಾಯಿತು. ಸಹಸ್ರಾರು ವಿಜ್ಞಾನಿಗಳ ಕೊಲೆ ನಡೆಯಿತು. ಎಲ್ಲವೂ ಷಡ್ಯಂತ್ರ. ಕಾನೂನನ್ನು ತಿರುಚಲಾಯಿತು. ಹಿಂದೂಗಳಿಗೆ ಕುಟುಂಬಯೋಜನೆ, “ನಾವಿಬ್ಬರು ನಮಗಿಬ್ಬರು” ಆದರೆ ಮತ್ತೊಬ್ಬರಿಗೆ “ನಾವು ಐವರು ನಮಗೆ ಇಪ್ಪತೈದು” ಎಂಬಂತಾಯಿತು. ಇಂದಿನ ಆಷಾಢಭೂತಿಗಳಾರೂ ಅವರಿಗೆ ಕಡಿಮೆ ಮಕ್ಕಳನ್ನು ಮಾಡಿಕೊಳ್ಳುವಂತೆ ಬುದ್ಧಿ ಹೇಳಿಲ್ಲ ಎಂದು ಅವರು ಪರೋಕ್ಷವಾಗಿ ಕಿಡಿಕಾರಿದರು.
ಹಿಂದೆ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಕಥೆಗಳಿದ್ದವು. ಜನರು ಸಂಸ್ಕೃತಿಯ ಬೇರಿನಿಂದ ದೂರಾಗಬೇಕೆಂದು ಅವುಗಳನ್ನು ತೆಗೆದು ಅಕ್ಬರ್, ಚಾಂದಬೀಬಿ ಕಥೆ ಹೇರಲಾಗಿದೆ. ಇದರ ಹಿಂದೆ ನಮ್ಮ ಇತಿಹಾಸ ನಮಗೆ ತಿಳಿಯಬಾರದೆಂಬ ಹುನ್ನಾರವಿದೆ. ದೇಶದ ಸ್ವಾತಂತ್ರ್ಯಾನಂತರ ದೇವಸ್ಥಾನಕ್ಕೆ ಕಾನೂನು ಬಂತು. ಚರ್ಚಿಗೆ, ಮಸೀದಿಗೆ ಕಾನೂನಿಲ್ಲ. ದೇವರ ಹುಂಡಿಯ ಹಣ ಸರ್ಕಾರಕ್ಕೆ, ಚರ್ಚನ ಹಾಗೂ ಮಸೀದಿಯ ಹಣ ಸರ್ಕಾರ ಮುಟ್ಟುವಂತಿಲ್ಲ. ಮಠಾಧೀಶರ ಮೇಲೆ ಆಪಾದನೆ, ಮುಲ್ಲಾಗಳ ಮೇಲೆ, ಪಾದ್ರಿಗಳ ಮೇಲೆ ಆಪಾದನೆಯಿಲ್ಲ. ಅಲ್ಲಿ ನಂಗಾನಾಚ್ ನಡೆದರೂ ಅವರ ಬಗ್ಗೆ ಚರ್ಚಿಸುವುದಿಲ್ಲ. ಇವೆಲ್ಲ ಸಮಾಜ ಒಡೆಯುವ ತಂತ್ರಗಾರಿಕೆ ಎಂದು ಅವರು ಆಪಾದಿಸಿದರು. ಇಂದು ಸಿದ್ರಾಮಯ್ಯ ಗ್ಯಾರಂಟಿ ತಲುಪುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಧಾನಿಯವರ ಗ್ಯಾರಂಟಿ ತಲುಪುತ್ತಿದೆ. ಲೋಕಸಭೆ ಚುನಾವಣೆಯ ನಂತರ ಉಚಿತ ಬಸ್ ಪ್ರಯಾಣ ನಿಲ್ಲಲಿದೆ. ಕಳೆದ ಒಂದು ವರ್ಷದಲ್ಲಿ ಕರ್ನಾಟಕ ಸರ್ಕಾರ ದಿವಾಳಿ ಅಂಚು ತಲುಪಿದೆ. ಶಾಸಕರಿಗೆ ಅನುದಾನದ ಹಣವಿಲ್ಲ. ನೌಕರರಿಗೆ ಸರಿಯಾಗಿ ವೇತನವಾಗುತ್ತಿಲ್ಲ. ಚುನಾವಣೆಯ ನಂತರ ಕಾಂಗ್ರೆಸ್ ಮುರಿದ ಮನೆಯಾಗಲಿದೆ ಎಂದು ಅವರು ನುಡಿದರು. ರಾಮರಾಜ್ಯದ ಮೊದಲ ಹಂತ ಪ್ರಾರಂಭವಾಗಿದ್ದು ಮುಂದೆ ಕಾಶಿ, ಮಥುರಾ ಇದೆ. ರಾಮ ಮಾತ್ರ ಎದ್ದರೆ ಸಾಲದು, ನಮ್ಮಲ್ಲಿಯ ಜಟ್ಗ, ಚೌಡಿಯೂ ಏಳುವಂತಾಗಬೇಕು. ಬಹರೇನ್, ಸೌದಿ ಅರೇಬಿಯಾದಲ್ಲಿ ರಾಮನ ಭಜನೆ ಕೇಳಿ ಬರುತ್ತಿದೆ. ಬ್ರಿಟನ್, ಆಸ್ಟ್ರಿಯಾ, ರಷ್ಯಾ, ಆಫ್ರಿಕಾಗಳಲ್ಲಿಯೂ ಹಿಂದೂ ವಿಲೇಜ್ ಹೊಸ ಟ್ರೆಂಡ್ ಆರಂಭವಾಗಿದೆ.
ನಾವು ರಾಮಮಂದಿರ ಕಟ್ಟಿದ್ದೇವೆ. ಇದು ದುಡ್ಡಿದ್ದವರು ಕಟ್ಟಿದ ದೇವಾಲಯವಲ್ಲ. ನಾಡಿನ ಮೂಲೆ ಮೂಲೆಗಳಿಂದ ಹೋದ ಇಟ್ಟಿಗೆಗಳಿಂದ ನಿರ್ಮಾಣವಾಗಿದೆ. ನಾಡಿದ್ದು ಅಯೋಧ್ಯೆಯ ಕಾರ್ಯಕ್ರಮ ಸಾಂಗವಾಗಿ ನೆರವೇರಲಿದೆ. ನಂತರ ಚುನಾವಣೆಯೆಂಬ ಮಹಾ ಸಂಗ್ರಾಮ ಬರಲಿದೆ. ಮೋದಿಯವರಿಗೆ ಮೂರನೇ ಬಾರಿ ಗೆಲುವು ನೀಡಲು ದೇಶ ಸಿದ್ಧವಾಗಿದೆ. ದೇಶ ಮತ್ತು ಧರ್ಮ ನಮ್ಮ ಮೂಲಮಂತ್ರವಾಗಬೇಕು. ಬಿಜೆಪಿಯ ಗೆಲುವು ನಮ್ಮ ಗುರಿಯಾಗಬೇಕು. ಹಿಂದೆಂದಿ ಅಧಿಕ ಮತದಿಂದ ಕೆನರಾ ಕ್ಷೇತ್ರದಲ್ಲಿ ದಾಖಲೆಯ ಗೆಲುವಾಗಬೇಕು. ಹೊಸ ದಾಖಲೆ ಬರೆಯೋಣ. ನಿಮ್ಮ ನಿಮ್ಮಲ್ಲಿ ಏನೇ ಇದ್ದರೂ ಅದನ್ನು ಒತ್ತಟ್ಟಿಗಿಟ್ಟು ಎಲ್ಲ ಕಾರ್ಯಕರ್ತರೂ ಒಮ್ಮನಸ್ಸಿನಿಂದ ಪಕ್ಷಕ್ಕಾಗಿ ಒಂದಾಗಬೇಕು. ಐತಿಹಾಸಿಕ ಚುನಾವಣೆಯ ಮೂಲಕ ದೇಶದ-ಧರ್ಮದ ರಕ್ಷಣೆ ನಡೆಯುಂವಂತಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಸ್ವಾಗತಿಸಿದರು. ರಾಜ್ಯ ಸಮಿತಿಯ ಕೆ.ಜಿ.ನಾಯ್ಕ ಹಣಜೀಬೈಲ ಪ್ರಾಸ್ತಾವಿಕ ಮಾತನಾಡಿ ನರೇಂದ್ರ ಮೋದಿಯವರ ಸಾಧನೆಯ ಪರಿಚಯ ನೀಡಿ ಅನಂತಕುಮಾರ ಹೆಗಡೆಯವರು ರಾಜಕೀಯ ಮಾಡಲು, ಸಂಸದರಾಗಲು, ಮಂತ್ರಿಯಾಗಲು ರಾಜಕೀಯಕ್ಕೆ ಬಂದವರಲ್ಲ. ಧರ್ಮ ದೇಶದ ಪರವಾಗಿ ಚುನಾವಣೆಗೆ ನಿಂತವರು. ಇಂದು ಇದ್ದಿದ್ದನ್ನು ಇದ್ದಂತೆಯೇ ಹೇಳುವ ತಾಕತ್ತು ಇದ್ದರೆ ಅದು ಅನಂತಕುಮಾರ ಹೆಗಡೆಯವರಿಗೆ ಮಾತ್ರ. ಉತ್ತರ ಕನ್ನಡ ಜಿಲ್ಲೆಯ ಜನತೆ ಅವರ ನಾಯಕತ್ವ ಒಪ್ಪುತ್ತದೆ ಎಂದರು. ಬಿಜೆಪಿಯ ಚಂದ್ರು ದೇವಾಡಿಗ ಮಾತನಾಡಿದರು. ಪಕ್ಷದ ಗುರುಪ್ರಸಾದ ಹೆಗಡೆ, ಕೃಷ್ಣಮೂರ್ತಿ ಕಡಕೇರಿ, ಪ್ರಸನ್ನ ಹೆಗಡೆ, ನಾಗರಾಜ ನಾಯ್ಕ, ಎಸ್.ಕೆ.ಮೇಸ್ತ, ರಾಮಮೂರ್ತಿ ಕನ್ನಳ್ಳಿ, ಗಜಾನನ ನಾಯ್ಕ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.