ವಿಶೇಷ ಲೇಖನ: ಅದ್ಭುತ ಚೈತನ್ಯದ ವಿಶೇಷಚೇತನರಾದ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಪ್ರಮೋದ್ ಹೆಗಡೆ ಮುಂದಾಳತ್ವ ವಹಿಸಿ ಆಯೋಜಿಸಿದ್ದ ಇತಿಹಾಸ ಸಮ್ಮೇಳನವು ಜ್ಞಾನ ಭಂಡಾರವನ್ನೇ ತೆರೆದಿಟ್ಟಂತಿತ್ತು ಎಂದು ಕುಮಟಾ ತಾಲೂಕಿನ ಬಾಡಾದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರೆಹಮಾನ್ ಸಾಬ್ ಹೇಳಿದ್ದು, ಅವರ ಅಭಿಪ್ರಾಯ ಮಾತುಗಳು ಇಲ್ಲಿವೆ..
ಇತ್ತೀಚೆಗೆ ಕುಮಟಾದಲ್ಲಿ ನಡೆದ ಜಿಲ್ಲಾಮಟ್ಟದ ಇತಿಹಾಸ ಸಮ್ಮೇಳನವು ಅಭೂತಪೂರ್ವ ಯಶಸ್ಸು ಗಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಲಾಖೆಯಿಂದ ಯಾವುದೇ ಅನುದಾನವಿಲ್ಲದಿದ್ದರೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ರಾಷ್ಟ್ರಮಟ್ಟದ ಕಾರ್ಯಕ್ರಮದಂತೆ ಆಯೋಜನೆಗೊಂಡು ಯಶಸ್ಸುಕಂಡಿದ್ದು ಎಲ್ಲರನ್ನೂ ಆಶ್ಚರ್ಯಗೊಳಿಸುವಂತಿತ್ತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ಪದವಿ, ಪದವಿ ಪೂರ್ವ, ಪ್ರೌಢಶಾಲಾ ಇತಿಹಾಸ ಶಿಕ್ಷಕರು, ಹಾಗೂ ಜಿಲ್ಲೆಯ ಬಹುತೇಕ ಪದವಿ ಕಾಲೇಜುಗಳ, ಬಿಎಡ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಎಲ್ಲಾ ಸಭಿಕರನ್ನು ಸಂಪನ್ಮೂಲ ವ್ಯಕ್ತಿಗಳು ಜ್ಞಾನಸಾಗರದಲ್ಲಿ ಮುಳುಗೇಳಿಸಲು ಯಶಸ್ವಿಯಾದರು.
ವಿಶೇಷ ಚೇತನರಾದ ಪ್ರಮೋದ್ ಹೆಗಡೆ ಇವರಿಗೆ ಬೆನ್ನೆಲುಬಾಗಿ ನಿಂತವರು ಅವರ ಮಡದಿ. ಮನಸ್ಸಿನ ಚೈತನ್ಯದ ಎದುರು ದೇಹದ ಅಂಗವೈಕಲ್ಯ ಸೋತು ಮಣ್ಣಾಗುತ್ತದೆ ಎಂಬುದಕ್ಕೆ ಪ್ರಮೋದ ಹೆಗಡೆ ಆಯೋಜಿಸಿದ್ದ ಇತಿಹಾಸ ಸಮ್ಮೇಳನವೇ ಸಾಕ್ಷಿಯಾಗಿದೆ. ಇಂದಿನ ದಿನದಲ್ಲಿ ಒಂದು ಕಾರ್ಯಕ್ರಮ ಸಂಘಟಿಸುವುದು, ಸಭಿಕರನ್ನು ಸೇರಿಸುವುದು ಬಹು ಕಷ್ಟಕೆಲಸವಾಗಿದ್ದು, ಹಾಗಿರುವಾಗ ಕಾಲೇಜಿನ ಪ್ರಾಚಾರ್ಯರಾದಿಯಾಗಿ, ಹಳೆ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಇಂಥ ಒಂದು ಕಾರ್ಯಕ್ರಮ ಸಂಘಟಿಸಿರುವುದು ಒಂದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಪ್ರತಿಯೊಬ್ಬರ ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ವಿಜಯಾ ನಾಯ್ಕ್‌ರವರ ಸಹಕಾರ ಅಭಿನಂದನಾರ್ಹ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಕಂಚಿನ ಕಂಠದಿಂದ ಹೊರಹೊಮ್ಮಿದ ಪ್ರಸ್ತಾವಿಕ ನುಡಿಗಳು, ಸಭಿಕರಿಗೆ ಹೆಗಡೆಯವರ ಜ್ಞಾನದ ಪರಿಚಯ ಮಾಡಿದಾಗ ಒತ್ತರಿಸಿ ಬರುತ್ತಿದ್ದ ಭಾವನೆಗಳನ್ನು ತಡೆದು ನುಡಿದ ವಂದನಾರ್ಪಣೆ ಸಭಿಕರ ಮನಸ್ಸನ್ನು ತೇವ ಮಾಡಿತ್ತು. ಒಟ್ಟಾರೆಯಾಗಿ ಎಲ್ಲರಲ್ಲಿ ಏನಾದರೂ ಸಾಧಿಸಲೇಬೇಕೆಂಬ ಕಿಚ್ಚನ್ನು ಹೊತ್ತಿಸಿತ್ತು. ಕಾರ್ಯಕ್ರಮ ಒಟ್ಟಾರೆ ಸಾರ್ಥಕವಾಗಿದ್ದು, ಇಂತಹ ಕಾರ್ಯಕ್ರಮ ಆಯೊಜಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.– ರೆಹಮಾನ್ ಸಾಬ್, ಉಪನ್ಯಾಸಕ