ವಿಶೇಷ ಲೇಖನ: ಬಸ್ಸಿಳಿದು ಸಾಗರದ ಗಾಂಧಿ ಮೈದಾನದ ದಾರಿ ಹಿಡಿದಾಗ ರವಿ ಬಾನಂಗಳದಿ ಮರೆಯಾಗಿ ಚಂದ್ರನಾಗಮನವಾಗಿತ್ತು. ಆತುರಾತುರವಾಗಿ ಗಾಂಧಿ ಮೈದಾನದಲ್ಲಿ ಕಾಲಿಟ್ಟಾಗ ಎಲ್ಲಾ ನಮ್ಮವರೇ ಎನ್ನುವಷ್ಟು ಆತ್ಮೀಯತೆ. ಎಲ್ಲರ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಲೇ ಕಣ್ಣು ವೇದಿಕೆ ಈ ವರ್ಷ ಹೇಗೆ ಸಜ್ಜಾಗಿದೆ ಎಂದು ನೋಡುವ ಕಾತುರದಲ್ಲಿ ತೊಡಗಿತ್ತು. ವೇದಿಕೆಯ ಹತ್ತಿರ ಬಂದು ನಿಂತಾಗ ಪ್ರೀತಿಯ ವಸುಧಕ್ಕನ ಆತ್ಮೀಯ ಆಲಿಂಗನ ಕಣ್ಣು ತುಂಬಿಸಿತ್ತು. ಎರಡು ಕಲಾ ಕುಸುಮಗಳ ಮೂರ್ತರೂಪವೆತ್ತು ನಿಂತ ವೇದಿಕೆ ನೋಡಿದಾಗ ಆ ಕಲಾ ಲೋಕವನ್ನು ವರ್ಣಿಸದಂತಾಯ್ತು ನಾಲಿಗೆ.ಸಂಗೀತ ಶಾಲೆಯ ಎಲ್ಲ ವಿದ್ಯಾರ್ಥಿಗಳ ಗಾಯನ, ವಿಶೇಷ ಆಹ್ವಾನಿತ ಕಲಾವಿದರ ಗಾಯನ,ವಾದನಗಳು ಹೊರ ಜಗತ್ತು ಮರೆಸುವಂತಾದದ್ದು ನಿಜ.
ಅದೇನು ವಿಶೇಷ ಅಂತೀರಾ ?! ಎಲ್ಲ ಕಡೆ ಇಂಥ ಕಾರ್ಯಕ್ರಮಗಳು ಸರ್ವೇಸಾಮಾನ್ಯ ಅಂತೀರಿ ಅಲ್ವಾ ? ಇಲ್ಲೇ ಇದೇ ವಿಶೇಷ… ಸಂಗೀತ ಉತ್ಸವಗಳಲ್ಲಿ ಬರೀ ಸಂಗೀತಗಳೇ ಇರೋದು ಸಾಮಾನ್ಯ. ಆದರೆ ಇಲ್ಲೊಂದು ವಿಶೇಷ ಕಾರ್ಯಕ್ರಮ ನನ್ನ ಗಮನ ಸೆಳೆದದ್ದು.
‘ಪ್ರಾತ್ಯಕ್ಷಿಕೆ‘ ಹೆಸರು ಕೇಳಿದ್ರೆ ಹಲವರ ಹಣೆಯಲ್ಲಿ ಗೆರೆಗಳು. ‘ಅಯ್ಯೋ ಈಗ ಪ್ರಾತ್ಯಕ್ಷಿಕೆಯಂತೆ. ಬರೀ ಮಾತು ಕೊರೆತ ಸ್ವಲ್ಪ ಹೊತ್ತು ಕಳೀಲಿ ಆಮೇಲೆ ಮನರಂಜನೆಗೆ ಕಾರ್ಯಕ್ರಮಕ್ಕೆ ಹೋದರಾಯ್ತು’ ಅನ್ನೋ ಮಾತು ಸಾಮಾನ್ಯ. ಆದರೆ ಇಲ್ಲಿ ನಡೆದ ಪ್ರಾತ್ಯಕ್ಷಿಕೆ ಹೇಳಿಕೆಗೆ ವಿರುದ್ದವಾಗಿತ್ತು. ಹಲವು ವರ್ಷಗಳಿಂದ ಪ್ರತಿ ಸಂಗೀತೋತ್ಸವದಲ್ಲೂ ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸುತ್ತ ಬಂದಿದ್ದು. ಈ ವರ್ಷದ ಪ್ರಾತ್ಯಕ್ಷಿಕೆ ಇನ್ನೂ ಕಳೆಕಟ್ಟಿತ್ತು.
ಸಂಗೀತ ಯಾವುದೇ ಒಂದು ಶಾಸ್ತ್ರದಿಂದ ಹುಟ್ಟಿದ್ದಲ್ಲ. ಶಾಸ್ತ್ರದಿಂದ ಬೆಳದಿದ್ದು. ಅದು ಬೇರೆ ಬೇರೆ ಜನಾಂಗ ಹಾಗೂ ಪ್ರದೇಶಗಳ ಮಿತಿಯಲ್ಲಿ ಅವರವರದೇ ಆದ ರೀತಿಯಲ್ಲಿ ಬೆಳೆದು ಬಂದು ಜನರು ಜನರ ನಡುವೆ ಬಾಂಧವ್ಯ , ಎಲ್ಲ ಕಷ್ಟ, ಸುಖಗಳನ್ನು ಮರೆತು ಸಂತೋಷಗಳನ್ನು ಹಂಚಿಕೊಂಡು ಅನುಭವಿಸುವ ಕಲೆಯಾಗಿ ಬೆಳೆಯುತ್ತಾ ಬಂದಿದ್ದು, ಎಷ್ಟೋ ವರ್ಷಗಳ ನಂತರ ಅದೇ ರೀತಿಯಾದ ಶೈಲಿ ಹಾಗೂ ಶಾಸ್ತ್ರದಿಂದ ಬೆಳೆದು ಬಂದು ಅದರದ್ದೇ ರೂಪ ತಳೆದು ನಿಂತಿದೆ ಎಂದು ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಪಂಡಿತ ಮೋಹನ ಹೆಗಡೆ ಹುಣಸೇಕೊಪ್ಪ ಹೇಳಿದರು.
ಶಿಶುಗೀತೆ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ರಂಗಗೀತೆ,ತತ್ವ ಪದಗಳು, ವಚನಗಳು, ದಾಸರ ಪದ, ಭಜನೆ,ನಗರ ಸಂಕೀರ್ತನೆ, ಯಕ್ಷಗಾನ, ಸಂಪ್ರದಾಯದ ಹಾಡು, ಬಿಂಗಿಪದ, ಬೀಸೋಹಾಡು, ಗೀಗಿಪದ,ಸುಗ್ಗಿ, ಕೋಲಾಟ ಹೀಗೆ ಹಲವಾರು ಪ್ರಾಕಾರಗಳು ಮೂಲದಿಂದ ಬೆಳೆದು ಬಂದಿದ್ದು, ಅವುಗಳಲ್ಲಿ ಕೆಲವು ಅಳಿವಿನ ಅಂಚಿನಲ್ಲಿರುವುದು ವಿಷಾದದ ಸಂಗತಿಯಾಗಿದೆ.
ಆದರೆ ಈ ಪ್ರಾತ್ಯಕ್ಷಿಕೆಯಲ್ಲಿ ಅವೆಲ್ಲವುಗಳನ್ನು ಸಂಗೀತ ಶಾಲೆಯ ವಿದ್ಯಾರ್ಥಿಗಳ ಮೂಲಕವೇ ಸಾದರ ಪಡಿಸುವಂತಹ ಮಾದರಿ ಹಾಗೂ ಬಹಳ ಉಪಯುಕ್ತ ಕಾರ್ಯಕ್ರಮ ಇಲ್ಲಿ ನಡೆಯಿತು. ಇಂತಹ ಉಪಯುಕ್ತ ಕಾರ್ಯಕ್ರಮಕ್ಕೆ ಸಭಾಂಗಣ ಕಲಾಸಕ್ತರಿಂದ ತುಂಬಿರುವುದು ಇಂದಿನ ದಿನಗಳಲ್ಲಿ ಇನ್ನೂ ಹೆಮ್ಮೆಯ ವಿಷಯ.
ಪ್ರತಿ ವರ್ಷವೂ ಒಂದೊಂದು ವಿಶಿಷ್ಟ ರೀತಿಯ ಪ್ರಾತ್ಯಕ್ಷಿಕೆ ನಡೆಯುತ್ತಾ ಬಂದಿದ್ದು, ಸಂಗೀತ ಕ್ಷೇತ್ರದ ಸವಿಸ್ತಾರವನ್ನು ತಿಳಿದುಕೊಳ್ಳುವದು ಸುಲಭಸಾಧ್ಯ ಎಂಬುದು ಪ್ರೇಕ್ಷಕರ ಅಭಿಪ್ರಾಯವೂ ಆಗಿತ್ತು.
ಇತ್ತೀಚೆಗೆ ನಡೆದ ಸಾಗರದ ವೇದನಾದ ಪ್ರತಿಷ್ಠಾ(ರಿ) ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ವಿದ್ಯಾಲಯದ. ಚತುರ್ವಿಂಶ:(24) ರಾಷ್ಟ್ರೀಯ ಸಂಗೀತೋತ್ಸವ ಇಂತಹ ಹಲವಾರು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಸಾಗರದ ಆಸುಪಾಸಿನ ಹಳ್ಳಿ, ಪಟ್ಟಣಗಳನ್ನು ದಾಟಿ ತಾಲೂಕು, ಜಿಲ್ಲೆ, ರಾಜ್ಯ , ದೇಶವ್ಯಾಪಿ ಇದರ ಘಮ ಹರಡಿ ಎಲ್ಲರನ್ನೂ ಸೆಳೆದು ಸಾಗರದೆಡೆ ಜನ ಸಾಗರ ಎನ್ನುವಷ್ಟು ಪ್ರಚಲಿತವಾಗಿದೆ.
ದೇಶದ ಹಲವಾರು ಕಡೆಗಳಿಂದ ಸಂಗೀತ ದಿಗ್ಗಜರು ಆಗಮಿಸಿ ಕಾರ್ಯಕ್ರಮ ನೀಡಿದ ಖ್ಯಾತಿ ಈ ಸಂಸ್ಥೆಯದು. ಕಲೆ ಕೇವಲ ಮನರಂಜನೆಗಷ್ಟೆ ಆಗದೆ ನಮ್ಮ ಹಿಂದಿನವರ ಶ್ರಮದ ತಿಳುವಳಿಕೆಯೂ ನಮಗೆ ಅವಶ್ಯವಾದುದು. ಕಲಾ ಕ್ಷೇತ್ರ ಸಾಗರವಿದ್ದಂತೆ. ಅದರ ಆಳ ಅರಿಯುವುದು ಸುಲಭವಲ್ಲ, ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ತಿಳಿಸುವ ಪ್ರಾತ್ಯಕ್ಷಿಕೆಗಳನ್ನು ಎಲ್ಲ ಕಡೆ ನಡೆಸಿ ಸರ್ವರೂ ಕಲೆಯ ಮಹತ್ವ ಅರಿಯುವಂತಾಗಲಿ.
ಈಗಾಗಲೇ 24 ವರ್ಷ ಪೂರೈಸುತ್ತಿರುವ ವೇದನಾದ ಪ್ರತಿಷ್ಠಾನ ಸಂಸ್ಥೆ ಇನ್ನೂ ಹೆಚ್ಚಿನ ಯಶಸ್ಸು ಕಂಡು ಮಾದರಿಯಾಗಿ ಬೆಳೆಯಲಿ ಪ್ರತಿಷ್ಠಾನದ ಸರ್ವರಿಗೂ ಈ ಮೂಲಕ ಅಭಿನಂದನೆಗಳು.– ಬಿಂದು ಹೆಗಡೆ, ಶಿರಸಿ