Slide
Slide
Slide
previous arrow
next arrow

ಜ.27ಕ್ಕೆ ಕನ್ನಡಗಲ್ ಸರ್ಕಾರಿ ಶಾಲೆ ಅಮೃತ ಮಹೋತ್ಸವ: ಭರದಿಂದ ಸಾಗಿದ ಸಿದ್ಧತೆ

300x250 AD

ಯಲ್ಲಾಪುರ: ತಾಲೂಕಿನ ಕನ್ನಡಗಲ್ ಚಿಕ್ಕಮಾವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಜ.27 ರಂದು ಅಮೃತ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಊರಹಿರಿಯರ ಶ್ರಮದಿಂದ ಖಾಸಗಿಯಾಗಿ ನಡೆಯುತ್ತಿದ್ದ ಶಾಲೆ, 1947 ರಲ್ಲಿ ಅಧಿಕೃತ ಸರ್ಕಾರಿ ಶಾಲೆಯಾಗಿ ಆರಂಭಗೊಂಡಿತು. ದಿ. ಮಹಾಬಲೇಶ್ವರ ಭಟ್ಟ ಹಿಟ್ಟಿನಬೈಲ್ ಅವರು ಶಾಲೆಗಾಗಿ ಸ್ಥಳ ದಾನ ಮಾಡಿದರು. ಬಿದಿರಿನ ತಟ್ಟಿಯ ಕಟ್ಟಡದಿಂದ ಆರಂಭಗೊಂಡು, ನಂತರ ಊರವರ ದೇಣಿಗೆ, ಶ್ರಮದಾನ ಹಾಗೂ ಸರ್ಕಾರದ ಅನುದಾನಗಳೊಂದಿಗೆ ಕಟ್ಟಡಗಳನ್ನು, ಎಲ್ಲ ಸೌಲಭ್ಯಗಳನ್ನು ಹೊಂದುವ ಮೂಲಕ ಶೈಕ್ಷಣಿಕ ಕೇಂದ್ರವಾಗಿ ಶಾಲೆ ರೂಪುಗೊಂಡಿತು. ಮೊದಲು 1 ರಿಂದ 4 ನೇ ತರಗತಿಯವರೆಗೆ ಮಾತ್ರ ಅವಕಾಶವಿತ್ತು. ನಂತರ 7 ನೇ ತರಗತಿಯವರೆಗೆ ವಿಸ್ತರಣೆಗೊಂಡಿತು. ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಶಿಕ್ಷಣದ ಬೆಳಕನ್ನು ನೀಡಿ, ಉಜ್ವಲ ಭವಿಷ್ಯ ರೂಪಿಸುವಲ್ಲಿ ಈ ಶಾಲೆ ಅಡಿಪಾಯವಾಯಿತು. ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಿದ್ದಾರೆ. ಹಿಂದೆ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇದೇ ಶಾಲೆಯನ್ನು ಆಶ್ರಯಿಸಬೇಕಿತ್ತು. ಸರ್ವ ಶಿಕ್ಷಣ ಅಭಿಯಾನ ಬಂದ ನಂತರ ಸಮೀಪದ ಗ್ರಾಮಗಳಲ್ಲಿಯೂ ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಪ್ರಸ್ತುತ 3 ಶಿಕ್ಷಕರಿದ್ದು, 34 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಅಮೃತ ಮಹೋತ್ಸವ: ಶಾಲೆಯ ಅಮೃತ ಮಹೋತ್ಸವ ಜ.27 ರಂದು ಸಂಭ್ರಮದಿಂದ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ. ಅಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಮೃತ ಮಹೋತ್ಸವ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ. ವಿಜ್ಞಾನ ವಸ್ತು ಪ್ರದರ್ಶನ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ನೆರವೇರಲಿದೆ. ನಂತರ ಗಣ್ಯರು, ಜನಪ್ರತಿನಿಧಿಗಳು, ಮುಖಂಡರ ಉಪಸ್ಥಿತಿಯಲ್ಲಿ ಉದ್ಘಾಟನೆ, ಸಾಧಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ, ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಂಜೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಕ್ಕೆ ಸ್ಥಳೀಯ ಯುವಕ ಸಂಘದವರಿಂದ ‘ರೈತನ ಕಣ್ಣೀರು’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

300x250 AD

ಗ್ರಾಮೀಣ ಭಾಗದ ಶಾಲೆಯೊಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಪಾಲಕರು, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಎಲ್ಲರ ಸಹಕಾರದೊಂದಿಗೆ ಶಾಲೆಯ ಅಮೃತ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಲು ಮುಂದಾಗಿದ್ದೇವೆ.— ಮಧುಕರ ಹೆಗಡೆ, ಮುಖ್ಯಾಧ್ಯಾಪಕರು

Share This
300x250 AD
300x250 AD
300x250 AD
Back to top