ಶಿರಸಿ: ಸೇವಾ ಖಾಯಂಮಾತಿ, ಉದ್ಯೋಗ ಭದ್ರತೆ ಹಾಗೂ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿ ಶಿರಸಿ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬುಧವಾರ ಸಚಿವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಕೆಲವು ವರ್ಷಗಳಿಂದ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ನಾವು ಸೇವೆ ಸಲ್ಲಿಸುತ್ತಿದ್ದೇವೆ. ಖಾಯಂ ಉಪನ್ಯಾಸಕರಿಗೆ ಸಮವಾಗಿಯೇ ನಾವು ಬೋಧನೆ ಮಾಡುತ್ತಿದ್ದೇವೆ.ಭಡ್ತಿ ಹಾಗೂ ವರ್ಗಾವಣೆಯ ಮೂಲಕ ಬರುವವರಿಂದ ನಾವು ಬೀದಿಪಾಲಾಗುತ್ತೇವೆ. ಆದ್ದರಿಂದ ನಮ್ಮ ವಿದ್ಯಾರ್ಹತೆ ಹಾಗೂ ಸೇವಾ ಅವಧಿಯನ್ನು ಪರಿಗಣಿಸಿ ಮಾನವೀಯ ಮೌಲ್ಯದ ಮೂಲಕ ಸೇವಾ ಖಾಯಂಮಾತಿ ನೀಡಬೇಕು. ಎಂಥಹದೇ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕೂ ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾಗದಂತೆ ಉದ್ಯೋಗ ಭದ್ರತೆ ನೀಡಬೇಕು.ಅತಿಥಿ ಉಪನ್ಯಾಸಕರು ಸೇವೆ ಮಾಡಿದ ತಲಾ ಒಂದು ವರ್ಷಕ್ಕೆ 5ಅಂಕಗಳ ಕೃಪಾಂಕವನ್ನು ಮುಂಬರುವ ಪದವಿ ಪೂರ್ವ ಉಪನ್ಯಾಸಕರ ಸಿಇಟಿ ಪರೀಕ್ಷೆಯಲ್ಲಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಭವ್ಯಾ ಹೆಗಡೆ,ಆರತಿ ಭಟ್ ,ಕಾಂತಿ ಹೆಗಡೆ,ಭಾರತಿ ನಾಯ್ಕ, ಸುಮಂಗಲಾ ದೇವಾಡಿಗ,ಮುಕಾಂಬೆ ನಾಯ್ಕ, ಪೂರ್ಣಿಮಾ ಶೆಟ್ಟಿ ಇದ್ದರು.