ಭಟ್ಕಳ: ಅಯೋಧ್ಯೆ ಶ್ರೀ ರಾಮಮಂದಿರ ಲೋಕಾರ್ಪಣೆಯ ಪ್ರಯುಕ್ತ ಶ್ರೀ ಕುದುರೆಬೀರಪ್ಪ ಹಾಗೂ ಶ್ರೀ ಮುಖ್ಯಪ್ರಾಣ ಹನುಮಂತ ದೇವಸ್ಥಾನದಲ್ಲಿ ಜ.18 ರಿಂದ ಜ.22ರವರೆಗೆ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಅನಂತ ನಾಯ್ಕ ಮತ್ತು ಕೃಷ್ಣ ನಾಯ್ಕ ಮಾಹಿತಿ ನೀಡಿದರು. ಕೆಳದಿ ರಾಜ ವೆಂಕಟಪ್ಪ ನಾಯಕ ಮೊಟ್ಟ ಮೊದಲ ಬಾರಿಗೆ ಅಂದರೆ 1600 ಇಸವಿಯ ಸುಮಾರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಸಿರುವ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ. ಶ್ರೀ ಕುದುರೆಬೀರಪ್ಪ ಹಾಗೂ ಶ್ರೀ ಮುಖ್ಯಪ್ರಾಣ ಹನುಮಂತ ದೇವಸ್ಥಾನವು ಈ ಹಿಂದೆ ಇದೇ ಕೆಳದಿ ಸಂಸ್ಥಾನದ ವ್ಯಾಪ್ತಿಗೆ ಬಂದಿರುವುದರಿಂದ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಯ ಕಾರ್ಪಣೆಯ ಸಂದರ್ಭದಲ್ಲಿ ಇಲ್ಲಿಯೂ ಲಕ್ಷದೀಪೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಇಲ್ಲಿನ ಯುವಕರು ಟೊಂಕಕಟ್ಟಿ ನಿಂತಿದ್ದು ಇದು ನಮ್ಮೂರ ಹೆಮ್ಮೆಯ ಕಾರ್ಯಕ್ರಮವಾಗಿದೆ. ಲಕ್ಷದೀಪೋತ್ಸವದ ಪ್ರಯುಕ್ತ ಜ.18 ರಿಂದ ಜ.22ರವರೆಗೆ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 9 ರವರೆಗೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಜ.22ರಂದು ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಸರಿಸುಮಾರು 8000 ಜನರು ನಿರೀಕ್ಷೆ ಇದೆ. ತಾಲೂಕಿನ ವಿವಿಧ ಜಾತಿ, ಸಮುದಾಯ ಮುಖಂಡರಿಗೆ ಆಮಂತ್ರಣ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಂಡರು. ದೇವಸ್ಥಾನದ ಆಡಳಿತ ಮಂಡಳಿತ ಅಧ್ಯಕ್ಷ ರಾಮಚಂದ್ರ ನಾಯ್ಕ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ನಾಗೇಶ ನಾಯ್ಕ, ಗೌರವಾಧ್ಯಕ್ಷ ಚಂದ್ರು ನಾಯ್ಕ, ಕಾರ್ಯದರ್ಶಿ ಯಶೋಧರ ನಾಯ್ಕ, ಭಾಸ್ಕರ ನಾಯ್ಕ, ಸುರೇಶ ಹೊಸ್ಟನೆ, ಭಾಸ್ಕರ ಆಚಾರ್ಯ, ಲೊಕೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.