ಜೋಯಿಡಾ : ತಾಲೂಕಿನ ರಾಮನಗರದ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯು ಮಂಗಳವಾರ ಸಂಜೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ. ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೆ ಇದ್ದರೆ ಇದು ಹಿಂದೂ ರಕ್ತವೇ ಅಲ್ಲ ಎಂದರು. ಇಂದಿರಾಗಾಂಧಿ ಅಂದಿನ ಪ್ರಧಾನಿಯಾಗಿದ್ದ ಸಮಯದಲ್ಲಿ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನವೇ ನಡೆದಿತ್ತು. ಆಂದೋಲನದಲ್ಲಿ ಹತ್ತಾರು ಸಂತರು ಸತ್ತರು. ಗೋಲಿಬಾರ್ ಕೂಡ ಆಯಿತು. ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆಯು ನಡೆಯಿತು. ಈ ವೇಳೆ ನೂರಾರು ಗೋವುಗಳನ್ನು ಗುಂಡಿಟ್ಟು ಕೊಲ್ಲಲಾಯಿತು. ಈ ಘಟನೆಯಿಂದ ನೊಂದ ಪೂಜ್ಯ ಕರ್ಪಾತ್ರಿ ಯತಿಗಳು ಇಂದಿರಾಗಾಂಧಿಯವರಿಗೆ ಗೋಪಾಷ್ಟಮಿ ದಿನದಂದೇ ನಿನ್ನ ಕುಲ ನಾಶವಾಗಲಿದೆ ಎಂದು ಶಾಪ ನೀಡಿದರು. ಅವರು ನೀಡಿದ ಶಾಪದಂತೆ ಗೋಪಾಷ್ಟಮಿಯ ದಿನವೆ ಒಬ್ಬೊಬ್ಬರು ಅಂತ್ಯವಾದರು ಎಂದರು. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದು ಜಾಗೃತ ಹಿಂದೂ ಸಮುದಾಯದ ಅತ್ಯಂತ ಹೆಮ್ಮೆ ಮತ್ತು ಪುಣ್ಯದ ಕಾರ್ಯವಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿಯೂ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಸಂತೋಷ್ ರೇಡ್ಕರ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಮಾಂಜ್ರೇಕರ್, ಸಂತೋಷ್ ದೇಸಾಯಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾಜಿ ಗೋಸಾವಿ ಮೊದಲಾದವರು ಉಪಸ್ಥಿತರಿದ್ದರು.