ದಾಂಡೇಲಿ: ಸಮಾಜಮುಖಿ, ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಸಂರಕ್ಷಣಾ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಾಂಡೇಲಿ ಪ್ರೆಸ್ ಕ್ಲಬ್, ದಾಂಡೇಲಿ ಪ್ರವಾಸೋದ್ಯಮಿಗಳ ಸಂಘ, ದಾಂಡೇಲಿ -ಜೋಯಿಡಾ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲಕರ ಸಂಘ ಇವುಗಳ ಸಂಯುಕ್ತ ಆಶ್ರಯದಡಿ ನಗರದ ಸಮೀಪದಲ್ಲಿರುವ ವಿಟ್ನಾಳದ ನದಿಮನೆ ಹೋಂ ಸ್ಟೇಯ ಆವರಣದಲ್ಲಿ ನಡೆದು ನೋಡು ಕರ್ನಾಟಕ, ದಾಂಡೇಲಿ ನಡಿಗೆ : ಪರಿಸರದ ಅರಿವಿಗಾಗಿ ಪ್ರವಾಸ ಕಾರ್ಯಕ್ರಮವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಅರಣ್ಯ ಇಲಾಖೆ, ಸಮಾಜಮುಖಿ ಹಾಗೂ ದಾಂಡೇಲಿಯ ವಿವಿಧ ಸಂಘಟನೆಗಳ ಸೇರಿ ಪ್ರತ್ಯೇಕವಾಗಿ ಮೂರು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಸಮೃದ್ಧ ಅರಣ್ಯ ಸಂಪತ್ತನ್ನು ನೋಡಬೇಕಾದರೆ ದಾಂಡೇಲಿ, ಜೋಯಿಡಾದಂತಹ ಪ್ರದೇಶಕ್ಕೆ ಬರಬೇಕು. ಸಮಾಜಮುಖಿ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ನಡೆದು ನೋಡು ಕರ್ನಾಟಕ ಕಾರ್ಯಕ್ರಮ ಅತ್ಯುತ್ತಮವಾದ ಕಾರ್ಯಕ್ರಮವಾಗಿದ್ದು, ನಿಸರ್ಗ ಸಂಪತ್ತಿನ ರಕ್ಷಣೆಗೆ ಈ ಕಾರ್ಯಕ್ರಮ ಪ್ರೇರಣಾದಾಯಿಯಾಗಿದೆ ಎಂದರು.
ಪರಿಸರ ಸಂರಕ್ಷಣಾ ಸಂಸ್ಥೆಯ ಅಧ್ಯಕ್ಷರಾದ ಡಾ.ಬಿ.ಪಿ.ಮಹೇಂದ್ರಕುಮಾರ್ ಸಮಾಜಮುಖಿ ಸಂಘಟನೆಯು ಮಾದರಿ ಹಾಗೂ ನಮ್ಮ ನಾಡಿನ ಸಮೃದ್ಧ ಪರಿಸರ ಮತ್ತು ಜೀವ ವೈವಿಧ್ಯತೆಯ ಸಂರಕ್ಷಣೆಯ ನಿಟ್ಟಿನಲ್ಲಿ ಬಹುಮೂಲ್ಯ ಕೊಡುಗೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜಮುಖಿಯ ಸದಸ್ಯರಾದ ಹರಿನಾಥ್ ಬಾಬು ಅವರು ವಹಿಸಿ, ನಮಗೆ ಎಲ್ಲವನ್ನೂ ನೀಡಿದ ಈ ಪರಿಸರಕ್ಕೆ ನಮ್ಮ ಕೊಡುಗೆಗಳೇನು? ಎನ್ನುವುದನ್ನು ಪ್ರತಿಯೊಬ್ಬರು ಯೋಚನೆ ಮಾಡಬೇಕಾಗಿದೆ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮನ್ನು ನಾವು ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಕೃಷ್ಣ ಪಾಟೀಲ್, ದಾಂಡೇಲಿ-ಜೋಯಿಡಾ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್, ದಾಂಡೇಲಿ ಪ್ರವಾಸೋದ್ಯಮಗಳ ಸಂಘದ ಅಧ್ಯಕ್ಷರಾದ ಮಿಲಿಂದ್ ಕೋಡ್ಕಣಿ, ಅಂಬೇವಾಡಿ ಗ್ರಾ.ಪಂ ಅಧ್ಯಕ್ಷರಾದ ಜಿ.ಈ.ಪ್ರಕಾಶ್, ನದಿ ಮನೆ ಹೋಂ ಸ್ಟೇಯ ಮಾಲಕರಾದ ಜಿ.ಈ.ಉಮೇಶ್, ವಲಯಾರಣ್ಯಾಧಿಕಾರಿಗಳಾದ ಅಪ್ಪರಾವ್ ಕಲಶೆಟ್ಟಿ, ಎ.ಎಸ್.ಬೈಲಾ ಮೊದಲಾದವರು ಭಾಗವಹಿಸಿದ್ದರು.
ರಮೇಶ್ ಗಬ್ಬೂರ್ ಭಾವಗೀತೆಯನ್ನು ಹಾಡಿದರು. ಡಾ.ಕಲೀಮ್ ಉಲ್ಲಾ ಅವರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಬೆಳಗೆರೆ ಅವರು ಸಮಾಜಮುಖಿ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ನಾಗರಾಜ ವಂದಿಸಿದರು. ಶುಭ ಅರಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಗರದ ಕೆ.ಸಿ ವೃತ್ತದಿಂದ ಸೋಮಾನಿ ವೃತ್ತದವರೆಗೆ ಪರಿಸರದ ಅರಿವಿಗಾಗಿ ನಡಿಗೆ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ದಾಂಡೇಲಿ ಪ್ರೆಸ್ ಕ್ಲಬ್, ಪ್ರವಾಸೋದ್ಯಮಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು, ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.