Slide
Slide
Slide
previous arrow
next arrow

ಎಂಡೋ ಬಾಧಿತರ ಹಿತರಕ್ಷಣಾ ವೇದಿಕೆ ರಚನೆಗೆ ತೀರ್ಮಾನ: ಡಾ. ವೆಂಕಟೇಶ ನಾಯ್ಕ

300x250 AD

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಜಿಲ್ಲಾಧಿಕಾರಿ ಎಂಡೋಸಲ್ಫಾನ್ ಕುಂದುಕೊರತೆಗಳ ಸಮಿತಿಯ ಸಭೆ ನಡೆಸಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ, ಎಂಡೋಸಲ್ಫಾನ್ ಬಾಧಿತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿರುವುದು ಸಂತಸದ ವಿಚಾರವಾಗಿದೆ. ಆದರೆ ಕೆಲವು ಬೇಡಿಕೆಗಳನ್ನು ಕೂಡ ಈಡೇರಿಸಲು ಪ್ರಯತ್ನಿಸಬೇಕು ಎಂದು ಸ್ಕಾಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೇಳಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಭಟ್ಕಳದಲ್ಲಿ ಮರುಸಮೀಕ್ಷೆಗಾಗಿ ವಿಶೇಷ ಕ್ಯಾಂಪ್ ನಡೆಸಿರುವುದು ಹಾಗೂ ಮಂಕಿಯಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಸುಸಜ್ಜಿತ ಪುನರ್‌ವಸತಿ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದಾರೆ. ಆದರೆ ಜಿಲ್ಲಾ ಮಟ್ಟದ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿ ಕನಿಷ್ಠ 03ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ಪ್ರಗತಿ ಪರಿಶೀಲನೆ ನಡೆಸಬೇಕು. ಅದಿಲ್ಲವಾದಲ್ಲಿ ಪುನಃ ಎಂಡೋ ಬಾಧಿತರ ಸಮಸ್ಯೆ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ ಎಂದರು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿಂಪಡಿಸಲಾದ ಎಂಡೋಸಲ್ಫಾನ್ ಕ್ರಿಮಿನಾಶಕದಿಂದ ಬಾಧೆಗೊಳಗಾದ ಜನರ ಪುನರ್‌ವಸತಿಯ ಬಗ್ಗೆ ನಿರಂತರ ಹೋರಾಟಗಳು ನಡೆಯುತ್ತಿದ್ದರೂ, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಎಂಡೋಸಲ್ಫಾನ್ ಬಾಧಿತರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದ್ದರೂ ಈವರೆಗೂ ಬಾಧಿತ ಕುಟುಂಬಗಳನ್ನು ಪುನರ್‌ವಸತಿಗೊಳಿಸುವ ಯಾವುದೇ ಮಹತ್ವದ ಕಾರ್ಯವಾಗದೇ ಇರುವುದು ವಿಷಾದನೀಯವಾಗಿದೆ. ಎಂಡೋ ಬಾಧಿತರ ಪುನರ್‌ವಸತಿ ಬಗ್ಗೆ ಆದ್ಯತೆಯ ಮೇರೆಗೆ ಯೋಜನೆಗಳನ್ನು ರೂಪಿಸಿ ಕೇರಳ ಮಾದರಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗುವುದು ಎಂದು ಸರ್ಕಾರಗಳು ಹೇಳುತ್ತಾ ಬಂದಿದೆಯಾದರೂ ಅವಶ್ಯಕತೆ, ಬೇಡಿಕೆಯನ್ನಾಧರಿಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯಾವುದೇ ಕಾರ್ಯ ಆಗುತ್ತಿಲ್ಲ ಎಂದು ವಿವರಿಸಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸುಮಾರು 11794.23 ಹೆಕ್ಟೇರ್ ಗೇರು ನೆಡುತೋಪುಗಳಿಗೆ 1986 ರಿಂದ 2011ರ ಅವಧಿಯಲ್ಲಿ ಗೇರುಬೀಜದ ಇಳುವರಿಗೆ ಅಡ್ಡಿಯಾಗುತ್ತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಒಟ್ಟೂ 57000ಲೀಟರ್ ವಿಷಕಾರಿ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಸಿಂಪಡಿಸಿದೆ. ಆದರೆ ನಿಗಮವು ನೀಡಿದ ದಾಖಲೆಗಳ ಪ್ರಕಾರ ಒಟ್ಟೂ ಖರೀದಿಸಲಾದ ಕ್ರಿಮಿನಾಶಕಗಳ ಪ್ರಮಾಣ ಹಾಗೂ ಬಳಕೆ ಮಾಡಲಾದ ಪ್ರಮಾಣಕ್ಕೆ ಭಾರೀ ಪ್ರಮಾಣದ ವ್ಯತ್ಯಾಸವಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ನೀಡಿದ ವರದಿಯಲ್ಲಿ 778 ಬ್ಯಾರೆಲ್‌ಗಳ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿತ್ತು ಆದರೆ ಕಾರ್ಪೋರೇಷನ್ ಅಧಿಕಾರಿಗಳು ಕೇವಲ 20 ಬ್ಯಾರೆಲ್‌ಗಳನ್ನು ಮಾತ್ರ ತೋರಿಸಿದ್ದು ಉಳಿದ ಬ್ಯಾರೆಲ್‌ಗಳು ಏನಾದವು ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ಕೆಲವು ಸಿಬ್ಬಂದಿಗಳು ಹೇಳುವಂತೆ ಎಂಡೋಸಲ್ಫಾನ್ ಕ್ರಿಮಿನಾಶಕದ ಬಗ್ಗೆ ಆಕ್ಷೇಪಗಳು ಬರುತ್ತಿದ್ದಂತೆ ಬಾಕಿ ಇದ್ದ ಕ್ರಿಮಿನಾಶಕ ಮತ್ತು ಅದರ ದಾಸ್ತಾನು ಪರಿಕರಗಳನ್ನು ಭೂಮಿಯಲ್ಲಿ ಹೂತಿದ್ದೇವೆ ಎಂದು ಹೇಳುತ್ತಾರೆ. ಈ ಬಗ್ಗೆ ಸೂಕ್ತ, ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಎಂಡೋಸಲ್ಫಾನ್ ಬಾಧಿತರ ಪುನರ್‌ವಸತಿ ರಕ್ಷಣೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದ ಉಡುಪಿಯ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನಭಾಗರವರು ಹಸಿರು ನ್ಯಾಯಪೀಠಕ್ಕೆ ಸಲ್ಲಿಸಿದ ದೂರು ಅರ್ಜಿಯನ್ನು ಪುರಸ್ಕರಿಸಿದ ಹಸಿರು ನ್ಯಾಯಪೀಠವು ಕೇಂದ್ರ, ಕರ್ನಾಟಕ, ಕೇರಳ ಸರ್ಕಾರ, ಉಭಯ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿ ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ನೋಟೀಸ್ ಜಾರಿ ಮಾಡಿದ್ದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ವರದಿ ಸಲ್ಲಿಸಿದೆ. ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ ೩,೬೦೭ ಜನ ಉಡುಪಿ ಜಿಲ್ಲೆಯಲ್ಲಿ ೧,೫೧೪ ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ ೧,೭೯೩ ಜನ. ಸೇರಿದಂತೆ ಒಟ್ಟೂ ೬,೯೧೪ ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ಗೇರು ನೆಡುತೋಪಿನ ೫ ಕಿ.ಮೀ. ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ. ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಲ್ಲದೇ ಈಗಾಗಲೇ ಸರಿಯಾದ ಸಮಯದಲ್ಲಿ ಚಿಕಿತ್ಸೆ ಹಾಗೂ ಸೌಲಭ್ಯ ಸಿಗದೇ ನೂರಾರು ಜನ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.

300x250 AD

ಈ ಕಾರಣಕ್ಕಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕನಿಷ್ಠ ೦೩ ತಿಂಗಳಿಗೊಮ್ಮೆ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿ ಸಭೆ ನಡೆಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಗೇರು ಅಭಿವೃದ್ಧಿ ನಿಗಮವು ಬಳಕೆಯಾಗದೇ ಇರುವ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಯಾವ ರೀತಿ ವಿಲೇವಾರಿ ಮಾಡಿದ್ದಾರೆ ಹಾಗೂ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಬಗ್ಗೆ ತನಿಖೆಗೆ ಆದೇಶಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಸಿದಂತೆ ಉಳಿದ ಐದೂ ತಾಲೂಕುಗಳಲ್ಲಿಯೂ ಎಂಡೋಸಲ್ಫಾನ್ ಬಾಧಿತರ ಮರು ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕು. ತಾಲೂಕುವಾರು ಎಂಡೋಸಲ್ಫಾನ್ ಬಾಧಿತರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಇಲಾಖಾವಾರು ಗುರಿಯನ್ನು ನಿಗದಿಪಡಿಸಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಬಾಧಿತರ ಚಿಕಿತ್ಸೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಎಂಡೋಸಲ್ಫಾನ್ ಬಾಧಿತರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಅಥವಾ ಹಿಂದೆ ಇದ್ದ ಸುಸಜ್ಜಿತ ಫಿಸಿಯೋಥೆರಪಿ ಸಂಚಾರಿ ಆಸ್ಪತ್ರೆಯನ್ನು ಪುನರ್ ಜಾರಿಗೆ ತರಬೇಕು ಎಂದರು.
ಎಂಡೋಸೆಲ್ಫಾನ್ ಕಾರ್ಯಕ್ರಮಗಳ ಮೇಲ್ವಿಚಾರಕಿ ಮಾಲತಿ ಕರ್ಕಿ, ಸ್ಕೋಡ್‌ವೆಸ್ ಯೋಜನಾ ವಿಭಾಗದ ಮುಖ್ಯಸ್ಥೆ ವರ್ಷ ಹೆಗಡೆ, ಯೋಜನಾ ಸಂಯೋಜಕ ಪ್ರಸನ್ನಕುಮಾರ ಹೆಗ್ಗಡೆ, ವಿಜಯ ಕಾರವಾರ ಪತ್ರಿಕಾಗೋಷ್ಟಿಯಲ್ಲಿದ್ದರು.

ಎಂಡೋ ಬಾಧಿತರ ಹಿತರಕ್ಷಣಾ ವೇದಿಕೆ ರಚನೆಗೆ ತೀರ್ಮಾನ:
ಈ ಎಲ್ಲಾ ಒತ್ತಾಯಗಳೊಂದಿಗೆ ಎಂಡೋ ಬಾಧಿತರ ಧ್ವನಿಯನ್ನು ಗಟ್ಟಿಗೊಳಿಸಲು ಆರೂ ತಾಲೂಕುಗಳ ಎಂಡೋಸಲ್ಫಾನ್ ಬಾಧಿತರ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಉತ್ತರ ಕನ್ನಡ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಹಿತರಕ್ಷಣಾ ವೇದಿಕೆ ರಚಿಸಲು ತೀರ್ಮಾನಿಸಿರುತ್ತೇವೆ.– ಡಾ. ವೆಂಕಟೇಶ ನಾಯ್ಕ, ಸ್ಕಾಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ

Share This
300x250 AD
300x250 AD
300x250 AD
Back to top