ಸಿದ್ದಾಪುರ: ತಾಲ್ಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜ. 12 ರಿಂದ 16 ರ ವರೆಗೆ ಸಂಜೆ 4 ಗಂಟೆಯಿಂದ ಗೋ ದಿನ ಮತ್ತು ಗೋವಿಗಾಗಿ ಆಲೆಮನೆ ಹಬ್ಬವನ್ನು ನಡೆಸಲಾಗುತ್ತಿದೆ ಎಂದು ಗೋದಿನ ಸಮಿತಿಯ ಅಧ್ಯಕ್ಷ ಎಂ.ಜಿ.ರಾಮಚಂದ್ರ ಮರ್ಡುಮನೆ ತಿಳಿಸಿದ್ದಾರೆ.
ತಾಲೂಕಿನ ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ಹೊಸತನದೊಂದಿಗೆ ಹಳೆಯ ಸೊಬಗನ್ನು ಮೇಳೈಸುವುದು ಆಲೆಮನೆ ಹಬ್ಬದ ಉದ್ದೇಶವಾಗಿದೆ. ಜ.12ರ ಶುಕ್ರವಾರ ಸಂಜೆ ಆಲೆಮನೆ, ಆಹಾರೋತ್ಸವ, ಗೋಗಂಗಾರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಜ.13ರಂದು ಸಿದ್ದಾಪುರದ ಮೂಲದವರಾಗಿ ಹೊರಗಡೆ ನೆಲೆಸಿರುವ ಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಸ್ನೇಹಕೂಟ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜ.14ರ ಭಾನುವಾರ ವೃತ್ತಿಪರರ ಸಮ್ಮಿಲನ, ಕಾಮಧೇನು ಹವನ, ಗೋಮಾತೆಗೆ ಅಷ್ಟಾಂಗ ಸೇವೆ, ಗೋವಿಗೆ ಹೋಳಿಗೆಯೊಂದಿಗೆ ಭಕ್ಷ್ಯಗಳ ಸಂತರ್ಪಣೆ ಮತ್ತು ವಿಶೇಷವಾಗಿ ಒಂದು ಸಾವಿರ ತುಪ್ಪದ ದೀಪ ಬೆಳಗುವುದರ ಮೂಲಕ ಗೋಗಂಗಾರತಿಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಜಿಲ್ಲೆಯ ಮಾರ್ವಾಡಿ ಸಮಾಜ ಬಾಂಧವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.15ರಂದು ಜನಪ್ರತಿನಿಧಿಗಳ ಸಮಾವೇಶ ನಡೆಯಲಿದೆ. ಜ.16ರ ಮಂಗಳವಾರ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು ಪ್ರತಿದಿನವೂ ನಿಗದಿತ ಕಾರ್ಯಕ್ರಮಗಳ ನಂತರ ಗೋಗಂಗಾರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಚಟ್ನಳ್ಳಿ ಮಾತನಾಡಿ ಜ.12ರ ಶುಕ್ರವಾರ ಸಂಜೆ 4 ಗಂಟೆಗೆ ಪಟ್ಟಣದ ಉದ್ಯಮಿ ಆನಂದ ಈರಾ ನಾಯ್ಕ, ಸಿದ್ದಾಪುರದ ರೂಪ್ ಮಿಲನ್ ಮಾಲಿಕ ಭೀಮರಾಜ ಪಟೇಲ್, ಸಾಗರದ ರವೀಂದ್ರನಾಥ ಅವರು ಆಲೆಮನೆ, ಆಹಾರೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಗೋ ಸಮಿತಿಯ ಅಧ್ಯಕ್ಷ ಎಂ.ಜಿ.ರಾಮಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಗೋದಿನ ಸಮಿತಿಯ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟಾ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ನಂತರ ಮನು ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಆಲೆಮನೆ ಹಬ್ಬದ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದ್ದು ಹೆಸರಾಂತ ಕಲಾವಿದರಿಂದ ತಾಳಮದ್ದಲೆ, ಲಘುಸಂಗೀತ, ವೀರಗಾಸೆ, ಕೊಳಲು ವಾದನದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಯಾವತ್ತೂ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗೋದೇವತಾ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರು ಕೋರಿಕೊಂಡರು. ಶ್ರೀ ಮಠದ ಅಧ್ಯಕ್ಷ ಎಂ.ಎಂ.ಹೆಗಡೆ ಮಗೇಗಾರ, ಸರ್ವ ಸಂಯೋಜಕ ಶಾಂತಾರಾಮ ಹಿರೇಮನೆ ಕಾರ್ಯದರ್ಶಿ ಎಂ.ವಿ.ಹೆಗಡೆ ಮುತ್ತಿಗೆ ಇದ್ದರು.