ದಾಂಡೇಲಿ: ಆಟೋ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಐ.ಆರ್.ಗಡ್ಡೇಕರ್ ಎಚ್ಚರಿಕೆ ನೀಡಿದರು.
ಅವರು ಬುಧವಾರ ನಗರದ ಬರ್ಚಿ ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಸಂಚಾರಿ ನಿಯಮ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಟೋ ಚಾಲಕರು ಚಾಲನಾ ಪರವಾನಗೆಯನ್ನು ಹೊಂದಿರಬೇಕು. ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಸಮವಸ್ತ್ರ ಕಡ್ಡಾಯ ಧರಿಸಬೇಕು. ಪಾನಮತ್ತರಾಗಿ ವಾಹನ ಚಲಾಯಿಸುವಂತಿಲ್ಲ. ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯಬಾರದು. ತಮ್ಮ ತಮ್ಮ ಆಟೋ ವಾಹನವನ್ನು ಸುಸ್ಥಿತಿಯಲ್ಲಿಟ್ಟು, ಕಾಲಕಾಲಕ್ಕೆ ಸೂಕ್ತ ನಿರ್ವಹಣೆ ಮಾಡಿಕೊಳ್ಳಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಇಲಾಖೆಯ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಎಸೈ ಬಸವರಾಜ ಒಕ್ಕುಂದ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಟೋ ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.