ದಾಂಡೇಲಿ: ನಗರದ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 65ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಸಮಾರಂಭವು ಬುಧವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ನಗರಸಭೆಯ ಸದಸ್ಯೆ ಪದ್ಮಜಾ ಪ್ರವೀಣ್ ಜನ್ನು ಪ್ರತಿಯೊಬ್ಬರಿಗೂ ಶಾಲೆ, ಕಾಲೇಜು ತಮ್ಮ ಸದೃಢ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಮಹತ್ವದ ಅಡಿಗಲ್ಲು. ದಾಂಡೇಲಿಯ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ. 65 ವರ್ಷಗಳ ನಿರಂತರ ಸೇವೆ ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾಗಿದೆ ಎಂದರು.
ಕಲಾಕುಂಜ ಚಿತ್ರ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜನತಾ ವಿದ್ಯಾಲಯ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ದೇವದಿತ್ ರೀಟಾ ಎಂ.ಡಾಯಸ್ ಮಾತನಾಡಿ, ಮಹೋನ್ನತ ಸಂಕಲ್ಪದೊಂದಿಗೆ ದಿನಕರ ದೇಸಾಯಿ ಅವರು ಆರಂಭಿಸಿದ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ. ಪ್ರತಿಯೊಬ್ಬರ ಬದುಕಿನಲ್ಲಿಯೂ ವಿದ್ಯಾರ್ಥಿ ಜೀವನ ಅತೀ ಮುಖ್ಯವಾದ ಹಾಗೂ ಭದ್ರ ಭವಿಷ್ಯ ನಿರ್ಮಾಣಕ್ಕೆ ನಾಂದಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಶೈಕ್ಷಣಿಕ ಸಾಧನೆಯ ಸಾಧಕರಾಗಬೇಕೆಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನವೀನ್ ಕಾಮತ್ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ವಾಸದೇವ ಪ್ರಭು ಶೈಕ್ಷಣಿಕ ಕ್ಷೇತ್ರದ ವಿಚಾರದಲ್ಲಿ ದಾಂಡೇಲಿ ನಗರಕ್ಕೆ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆ ನೀಡಿದ ಕೊಡುಗೆ ಸ್ಮರಣೀಯ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಜಗತ್ತಿನ ನಾನಾ ದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸೇವೆ ಸದಾ ಶ್ಲಾಘನೀಯವಾಗಿದೆ ಎಂದರು.
ಸಂಸ್ಥೆಯ ಪ್ರಾಚಾರ್ಯರಾದ ಎಂ.ಎಸ್.ಇಟಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಎಂಎಸ್ ಶಾಲೆಯ ಮುಖ್ಯೋಪಾಧ್ಯಾಯನಿ ಸಕ್ಕುಬಾಯಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡೆ ಸಾಂಸ್ಕೃತಿಕ ಹೀಗೆ ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿ ಸನ್ಮಾನಿಸಲಾಯಿತು.
ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಅರವಳ್ಳಿ ಸ್ವಾಗತಿಸಿದರು. ಪ್ರಾಚಾರ್ಯರಾದ ಎಂ.ಎಸ್.ಇಟಗಿ ವಾರ್ಷಿಕ ವರದಿಯನ್ನು ವಾಚಿಸಿದರು. ಹಿರಿಯ ಉಪನ್ಯಾಸಕರಾದ ಯು.ಆರ್. ಘೋರ್ಪಡೆ ವಂದಿಸಿದರು. ಉಪನ್ಯಾಸಕಿ ನಿರೂಪಮಾ.ವಿ. ನಾಯಕ ನಿರೂಪಿಸಿದರು.