Slide
Slide
Slide
previous arrow
next arrow

ಜ.14ಕ್ಕೆ ಆರೋಹಿ ಶೈಕ್ಷಣಿಕ ದ್ವೈವಾರ್ಷಿಕ ಸಂಗೀತ ಸಮಾರೋಹ

300x250 AD

ಶಿರಸಿ: ನಗರದ ಲಯನ್ಸ್ ಶಾಲೆಯ ಸಭಾಭವನದಲ್ಲಿ ಜ.14 ಭಾನುವಾರ ಬೆಳಿಗ್ಗೆ 10 ಘಂಟೆಯಿಂದ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕೇಂದ್ರದ ದ್ವೈವಾರ್ಷಿಕ ಸಂಗೀತ ಸಮಾರೋಹ ನಡೆಯಲಿದೆ.

ಸಂಗೀತ ಸಮ್ಮೇಳನದ ಪೂರ್ವ ಯೋಜಿತವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಖ್ಯಾಲ್ ಗಾಯನ ಸ್ಪರ್ಧೆಯಲ್ಲಿ ಈವರೆಗೆ ಒಟ್ಟೂ 107 ಸ್ಪರ್ಧಿಗಳು ಪಾಲ್ಗೊಂಡಿದ್ದು, ಅವರಲ್ಲಿ ಅಂತಿಮ ಸುತ್ತಿಗಾಗಿ ಈಗಾಗಲೇ 5 ಸ್ಪರ್ಧಿಗಳನ್ನು ಆಯ್ಕೆಗೊಳಿಸಲಾಗಿದ್ದು, ಅಂದು ನಡೆಯುವ ಸಮ್ಮೇಳದಲ್ಲಿ ಆ ಐದು ಸ್ಪರ್ಧಿಗಳ ಗಾಯನ ಕಾರ್ಯಕ್ರಮ ಕೂಡ ನಡೆಯಲಿದೆ.

ಬೆಳಿಗ್ಗೆ 10 ಘಂಟೆಗೆ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಶಿವರಾಮ ಹೆಬ್ಬಾರ ಯಲ್ಲಾಪುರ, ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರದ ಸಂಕಲ್ಪದ ಪ್ರಮೋದ ಹೆಗಡೆ, ಧಾರವಾಡ ಹಾಲು ಒಕ್ಕೂಟ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಿರಸಿ ಟಿಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಎಸ್.ಆರ್.ಎಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ವೆಂಕಟರಮಣ ಹೆಗಡೆ ಕವಲಕ್ಕಿ, ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಲ. ಪ್ರಭಾಕರ ಹೆಗಡೆ, ಉಪಾಧ್ಯಕ್ಷ ಲ.ಕೆ.ಬಿ.ಲೋಕೇಶ ಹೆಗಡೆ, ಉದ್ಯಮಿ ಪ್ರಭಾಕರ ದೇವಾಡಿಗ, ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಉಪನ್ಯಾಸಕ ಡಾ.ಹರೀಶ ಹೆಗಡೆ ಪಾಲ್ಗೊಳ್ಳಲಿದ್ದಾರೆ.

300x250 AD

ಉದ್ಘಾಟನಾ ಸಮಾರಂಭದ ನಂತರದಲ್ಲಿ ಆರೋಹಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ ನಡೆಯಲಿದ್ದು, ನಂತರದಲ್ಲಿ ಗಾಯನ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧಿಗಳಾದ ಬೆಂಗಳೂರಿನ ದರ್ಶನ ಮಳವಂಕಿ, ವಿಜಯಪುರದ ವಿಶಾಲ ಕಟ್ಟಿ, ಧಾರವಾಡದ ವಿನೀತ ರಾಣಾಪುರ, ಅಂಕೋಲಾದ ಪೂಜಾ ಮಹಾದೇವ ಹೆಗಡೆ ಹಾಗೂ ಬೆಳಗಾವಿಯ ಸ್ತುತಿ ಕುಲಕರ್ಣಿ ಇವರಿಂದ ಸಂಗೀತ ಕಛೇರಿ ನಡೆಯಲಿದೆ. ಸಂಜೆ 5 ಗಂಟೆಯಿಂದ ಆರೋಹಿ ಸಂಗೀತ ಶಿಕ್ಷಕಿ ದೀಪಾ ಶಶಾಂಕ ಹೆಗಡೆ ಇವರಿಂದ ಗಾಯನ ನಡೆಯಲಿದ್ದು, ತದನಂತರದಲ್ಲಿ ಆಹ್ವಾನಿತ ಕಲಾವಿದರಾದ ಖ್ಯಾತ ಗಾಯಕ ಪಂಡಿತ ಡಾ.ಶ್ರೀಪಾದ ಹೆಗಡೆ ಕಂಪ್ಲಿ ಧಾರವಾಡ ಇವರ ಶಾಸ್ತ್ರೀಯ ಗಾಯನ ಪ್ರಸ್ತುತಗೊಳ್ಳಲಿದೆ. ಈ ಸಂದರ್ಭದಲ್ಲಿ ಹಾರ್ಮೋನಿಯಂನಲ್ಲಿ ಭರತ ಹೆಗಡೆ, ವಿಘ್ನೇಶ್ವರ ಭಾಗ್ವತ್ ಹಾಗೂ ತಬಲಾದಲ್ಲಿ ಗಣೇಶ ಗುಂಡ್ಕಲ್, ನಾಗೇಂದ್ರ ವೈದ್ಯ, ಶಿವರಾಮ ಹೆಗಡೆ ಸಹಕರಿಸಲಿದ್ದಾರೆ. ನಂತರ ನಡೆಯುವ ಸಮಾರೋಪದಲ್ಲಿ ಆರೋಹಿ ಸಾಧಕ ಪ್ರಶಸ್ತಿಯನ್ನು ಶಿರಸಿ ಲಯನ್ಸ್ ಶಾಲೆ ಶಿಕ್ಷಕಿ ರೂಪಾಲಕ್ಷ್ಮೀ ಶಾನಭಾಗ(ಕುಂದಾ ಮೇಡಂ) ರವರಿಗೆ ನೀಡಲಾಗುತ್ತಿದ್ದು, ಬಹುಮಾನ ವಿತರಣೆ ಕೂಡ ನಡೆಯಲಿದೆ ಎಂದು ಆರೋಹಿ ಅಧ್ಯಕ್ಷ ಶಶಾಂಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top